×
Ad

ಕೋರ್ಟ್ ಆದೇಶದ ಹೊರತು ರೈತರಿಗೆ ನೋಟೀಸ್ ನೀಡಿದರೆ ಅಧಿಕಾರಿಗಳೇ ಹೊಣೆ: ಸಚಿವ ಮಧುಬಂಗಾರಪ್ಪ

ಶಿವಮೊಗ್ಗ | ರೈತರಿಗೆ ನೋಟೀಸ್ ನೀಡದಂತೆ ಜಿ.ಪಂ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ನಿರ್ಣಯ

Update: 2025-11-28 18:56 IST

ಶಿವಮೊಗ್ಗ: ನ್ಯಾಯಾಲಯದ ಆದೇಶದ ಹೊರತು ಅನಗತ್ಯವಾಗಿ ರೈತರಿಗೆ ನೋಟೀಸ್ ನೀಡದಂತೆ ಜಿ.ಪಂ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯತ್ ನ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಶುಕ್ರವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಪ್ರಾರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ರೈತರಿಗೆ ನೋಟೀಸ್ ನೀಡಲಾಗುತ್ತಿದೆ. ಅರಣ್ಯ ಸಂರಕ್ಷಣಾ ಕಾಯ್ದೆ-1978ರ ಪೂರ್ವದಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ನೋಟೀಸ್ ನೀಡಲಾಗುತ್ತಿದೆ.ಕಂದಾಯ ಇಲಾಖೆಯಿಂದ ಹಕ್ಕುಪತ್ರ ಕೊಟ್ಟ ಜಾಗಕ್ಕೂ ನೋಟೀಸ್ ನೀಡುತ್ತಿದ್ದಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಸಚಿವ ಮಧುಬಂಗಾರಪ್ಪ ಅವರು,ಕೋರ್ಟ್ ಆದೇಶದ ಹೊರತು ರೈತರಿಗೆ ನೋಟೀಸ್ ನೀಡಿದರೆ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು.ಹೊಸ ಒತ್ತುವರಿಗೆ ಅವಕಾಶ ನೀಡಬಾರದು. ಜಂಟಿ ಸರ್ವೆಯಾಗದೆ ರೈತರಿಗೆ ಹೇಗೆ ನೋಟೀಸ್ ನೀಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಸಂಬಂಧಿತ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶೀಘ್ರದಲ್ಲಿ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಯಾವುದೇ ರೈತರಿಗೆ ನೋಟೀಸ್ ನೀಡುವ ಮುನ್ನ ಅರಣ್ಯ ಇಲಾಖೆಯವರು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಜಿಲ್ಲಾಧಿಕಾರಿ ಅನುಮತಿ ನೀಡಿದರೆ ಮಾತ್ರ ನೋಟೀಸ್ ಕೊಡಬೇಕು ಎಂದು ಸೂಚನೆ ನೀಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಂಟಿ ಸರ್ವೆ ಮಾಡದೆ ರೈತರಿಗೆ ಯಾಕೆ ನೋಟೀಸ್ ಕೊಡ್ತಿರಾ. ರೈತರನ್ನು ಯಾಕೆ ಭಯ ಬೀಳಿಸ್ತಿರಾ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಕಾಯ್ದೆ ಬರುವ ಮುನ್ನ ಸಾಗುವಳಿ ಮಾಡಿಕೊಂಡು ಉಳಿಮೆ ಮಾಡುತ್ತಿರುವ ರೈತರಿಗೆ ನೋಟೀಸ್ ಕೊಡುತ್ತಿದ್ದಾರೆ. ಸೆಕ್ಷನ್ 64 ಅಡಿಯಲ್ಲಿ ನೋಟೀಸ್ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯವರು ರೈತರನ್ನು ಪಾರ್ಟಿ ಮಾಡುವ ಜೊತೆಗೆ ಡಿಸಿ, ತಹಶೀಲ್ದಾರ್ ಅವರನ್ನು ಪಾರ್ಟಿ ಮಾಡಬೇಕು. ಆಗ ಸಮಸ್ಯೆ ಒಂದು ಹಂತಕ್ಕೆ ಬಗೆಹರಿಸುವ ಸಾಧ್ಯತೆ ಇದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ಮಾತನಾಡಿ, ಅರಣ್ಯ ಸಂರಕ್ಷಣಾ ಕಾಯ್ದೆ 1978 ಜಾರಿಗೂ ಮುನ್ನವೇ ಶರಾವತಿ ಹಾಗೂ ಭದ್ರಾ ಮುಳುಗಡೆ ರೈತರಿಗೆ ಹಕ್ಕುಪತ್ರ ನೀಡಲಾಗಿದೆ.ಈ ಮುಳುಗಡೆ ರೈತರಿಗೂ ನೋಟೀಸ್ ನೀಡಲಾಗುತ್ತಿದೆ.ಸಚಿವರು ಹಲವು ಬಾರಿ ಸೂಚನೆ ನೀಡಿದರು ಯಾಕೆ ನೋಟೀಸ್ ಕೊಡುತ್ತಿದ್ದಾರಾ.ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ.ಈ ಹಂತದಲ್ಲಿ ಯಾಕೆ ನೋಟೀಸ್ ಕೊಡುತ್ತಿದ್ದಾರ ಎಂದು ಪ್ರಶ್ನಿಸಿದರು.

ಡಿಸಿಎಫ್ ಪ್ರಸನ್ನ ಪಟಗಾರ್ ಪ್ರತಿಕ್ರಿಯಿಸಿ,ಸೆಕ್ಷನ್ 64 ಅಡಿಯಲ್ಲಿ ದಾಖಲೆ ಒದಗಿಸುವಂತೆ ನೋಟೀಸ್ ಕೊಟ್ಟಿದ್ದೇವೆ. ನ್ಯಾಯಾಲಯದ ಆದೇಶದಂತೆ ನೋಟೀಸ್ ಕೊಟ್ಟಿದ್ದೇವೆ ಹೊರತು ಯಾವುದೇ ರೈತರಿಗೂ ನೋಟೀಸ್ ಕೊಟ್ಟಿಲ್ಲ ಎಂದರು.

ಸಭೆಯಲ್ಲಿ ಶಾಸಕಿ ಶಾರದಾ ಪೂರ್‍ಯನಾಯ್ಕ್,ಶಾಸಕರಾದ ಚನ್ನಬಸಪ್ಪ,ಅರಗ ಜ್ಞಾನೇಂದ್ರ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ,ಜಿಲ್ಲಾಽಕಾರಿ ಗುರುದತ್ತ ಹೆಗಡೆ,ಜಿ.ಪಂ ಸಿಇಓ ಎನ್.ಹೇಮಂತ್ ಕುಮಾರ್,ಹೆಚ್ಚುವರಿ ಜಿಲ್ಲಾ ರಕ್ಷಣಾಽಕಾರಿ ರಮೇಶ್ ಕುಮಾರ್,ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

ಡಿಸೆಂಬರ್ ನಲ್ಲಿ ಡಿಮ್ಡ್ ಫಾರೆಸ್ಟ್ ಸರ್ವೆ:

ಅರಣ್ಯ ಇಲಾಖೆಯವರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಊರಿಗೆ ಊರೇ ಡಿಮ್ಡ್ ಫಾರೆಸ್ಟ್ ಮಾಡಲು ಹೊರಟಿದ್ದಾರೆ. ಪಹಣಿಯಲ್ಲಿ ಫಾರೆಸ್ಟ್ ಬರುತ್ತಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ,ಡಿಸೆಂಬರ್ ನಿಂದ ಡಿಮ್ಡ್ ಫಾರೆಸ್ಟ್ ಸರ್ವೆ ಮಾಡಲಾಗುತ್ತದೆ.ಸದ್ಯಕ್ಕೆ ಶರಾವತಿ ಮುಳುಗಡೆ ರೈತರ ಜಮೀನು ಸರ್ವೆ ನಡೆಸಲಾಗುತ್ತದೆ.ಜಂಟಿ ಸರ್ವೆ ಮಾಡಿದರೆ ಡಿಮ್ಡ್ ಫಾರೆಸ್ಟ್ ನಲ್ಲಿ ಲೋಪವಾಗಿದ್ದರೆ ಕೈಬಿಡಲು ಅವಕಾಶವಿದೆ.ಸರ್ವೆ ಮುಗಿದ ನಂತರ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಜನಪ್ರತಿನಿಧಿಗಳ ಸಲಹೆ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಕಾಡಾನೆ ಹಾವಳಿ ತಡೆಗೆ ಕ್ರಮ ಯಾಕಿಲ್ಲ:

ಸಾಗರ,ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದೆ.ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿ, ಕಾಡಾನೆ ದಾಳಿಯಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಹಲವು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರೈತರು ಪ್ರತಿಭಟನೆ ಮಾಡದ ಹೊರತು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಡಿಸಿಎಫ್ ಪ್ರಸನ್ನ ಪಟಗಾರ್ ಪ್ರತಿಕ್ರಿಯಿಸಿ, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಟ್ರಂಚ್ ಹೊಡೆಯಲಾಗಿದೆ.ಸೋಲಾರ್ ಫೆನ್ಸಿಂಗ್ ಅಳವಡಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News