ಕ್ಯಾನ್ಸರ್ ಪೀಡಿತ ಮಕ್ಕಳ ವಸತಿ ಶಾಲೆ ತೆರೆಯಲು ಯೋಜನೆ: ಸಚಿವ ಮಧುಬಂಗಾರಪ್ಪ ಮಹತ್ವದ ಘೋಷಣೆ
ಶಿವಮೊಗ್ಗ: ಕ್ಯಾನ್ಸರ್ ಪೀಡಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಶಿಕ್ಷಣ ಸಚಿವರಾಗಿ ಎರಡು ವರ್ಷ ಪೂರೈಸಿದ ಸವಿನೆನಪಿಗಾಗಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯದ ಜೊತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ಹಂತವಾಗಿ ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಪಕ್ಕದಲ್ಲೇ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಸಿದ್ದತೆ ಮಾಡಿಕೊಂಡಿದ್ದಾರೆ.
ಯಾವಾಗ ಪ್ರಾರಂಭ:
ಈಗಾಗಲೇ ಖಾಸಗಿ ಎನ್‌ಜಿಓ ಒಂದು ಜೊತೆ ಸಭೆ ನಡೆಸಿ ಯೋಜನೆ ರೂಪಿಸಿದ್ದೇನೆ. ಕಿದ್ವಾಯಿ ಆಸ್ಪತ್ರೆ ಸಮೀಪದಲ್ಲಿ ಖಾಸಗಿ ಕಟ್ಟಡವನ್ನು ನೋಡಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಪಡೆದುಕೊಂಡು ಜುಲೈ ಅಂತ್ಯದೊಳಗೆ ಪ್ರಾರಂಭಿಸಲಾಗುವುದು. ಎನ್‌ಜಿಓ ಅವರ ಮಾಹಿತಿ ಪ್ರಕಾರ ಈಗಾಗಲೇ 1,500 ಸಾವಿರ ಮಕ್ಕಳನ್ನು ಗುರುತಿಸಿದ್ದಾರೆ. ಇದಕ್ಕೂ ಹೆಚ್ಚು ಇರಬಹುದು. ಒಂದನೇ ತರಗತಿಯಿಂದ ಹತ್ತನೆ ತರಗತಿಯವರೆಗೆ ಶಿಕ್ಷಣ ನೀಡಲಾಗುವುದು. ವಿಸ್ತರಣೆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸಿಗಲಿರುವ ಸೌಲಭ್ಯಗಳು:
ಕ್ಯಾನ್ಸರ್ ಪೀಡಿತ ವಸತಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯಲು ಮಿನಿ ಬಸ್ ಹಾಗೂ ಕಾರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಆಟ,ಪಾಠಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲ ಮಕ್ಕಳಂತೆ ಅವರು ಗೌರವಯುತವಾಗಿ ಬದುಕಬೇಕು ಎಂಬುದು ನನ್ನ ಉದ್ದೇಶ ಎಂದು ಸಚಿವ ಮಧುಬಂಗಾರಪ್ಪ ಅನಿಸಿಕೆ ವ್ಯಕ್ತಪಡಿಸಿದರು.