×
Ad

ಈಗಿನ ಸರಕಾರದಲ್ಲೇ ಹೆಚ್ಚು ಕಮಿಷನ್: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರೋಪ

Update: 2025-08-20 23:15 IST

ಶಿವಮೊಗ್ಗ: ಹಿಂದಿನ ಸರಕಾರಕ್ಕಿಂತ ಈಗ ಕಮಿಷನ್ ಹೆಚ್ಚಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಆರೋಪ ಮಾಡಿದ್ದಾರೆ.

ಬುಧವಾರ ನಗರದ ಆಗಮುಡಿ ಕನ್ವೆನ್ಶನ್ ಹಾಲ್ ನಲ್ಲಿ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ, ಮಲೆನಾಡು ಗುತ್ತಿಗೆದಾರರ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳಲ್ಲಿ ಸರಕಾರದಿಂದ ರಾಜ್ಯದಲ್ಲಿನ ಗುತ್ತಿಗೆದಾರರಿಗೆ 32 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಇದನ್ನು ಸರಕಾರ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಕಳೆದ ಸರಕಾರದಲ್ಲಿ ಶೇ.40 ಕಮಿಷನ್ ಇತ್ತು. ಈಗ ಕಮಿಷನ್ ಹೆಚ್ಚಾಗಿದೆ ಎಂದು ಆರೋಪಿಸಿದರು.

ಗುತ್ತಿಗೆದಾರರು ಕೆಲಸ ಮಾಡುವುದು ಕಷ್ಟವಾಗಿದೆ. ಸಚಿವ ಭೈರತಿ ಸುರೇಶ್ ಕೆಲವರಿಗೆ ಅನುಕೂಲವಾಗುವಂತೆ ಸ್ಥಳೀಯವಾಗಿ ಟೆಂಡರ್ ಕರೆಯದೆ, ಬೆಂಗಳೂರಿನಲ್ಲಿ ಟೆಂಡರ್ ಮಾಡಿಕೊಡಲಾಗುತ್ತಿದೆ ಎಂದು ದೂರಿದರು.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಜಗನ್ನಾಥ್ ಸೇಠ್ ಮಾತನಾಡಿ, ಕೆಂಪಣ್ಣ ಅಜರಾಮರು, ಯಾರಿಗೂ ಎದೆಗುಂದದೆ ಜೀವನ ನಡೆಸಿದ ಅವರು ಗುತ್ತಿಗೆದಾರರಿಗೆ ಗೌರವ ತಂದಿದ್ದಾರೆ. ತಪ್ಪುಗಳನ್ನು ಸರಕಾರದ ಗಮನಕ್ಕೆ ತರಬೇಕು. ಆಗುವ ಕೆಲಸಗಳನ್ನು ಸರಕಾರಕ್ಕೆ ಮಾಡಿಕೊಡುವ ಜವಾಬ್ದಾರಿ ಗುತ್ತಿಗೆದಾರರದ್ದು ಎಂದರು.

ಇದಕ್ಕೂ ಮೊದಲು ಮಲೆನಾಡು ಗುತ್ತಿಗೆದಾರರ ಸಂಘದ ಲೋಗೋ ಬಿಡುಗಡೆ ಮಾಡಲಾಯಿತು. ಬಳಿಕ ಗುತ್ತಿಗೆದಾರರ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News