ರಿಪ್ಪನ್ ಪೇಟೆ | 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಶಿವಮೊಗ್ಗ : ರಿಪ್ಪನ್ ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹಿರೇಸಾನಿ ಗ್ರಾಮದ 13 ಮಕ್ಕಳಿಗೆ ಮಂಗಳವಾರ ಇರುಳುಗಣ್ಣು ಮುಂಜಾಗ್ರತಾ ಕ್ರಮವಾಗಿ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಅಂದು ಸಂಜೆಯಿಂದ 13 ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬುಧವಾರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 11 ಮಕ್ಕಳನ್ನು ಕರೆ ತಂದಿದ್ದಾರೆ. ಪಟ್ಟಣದ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರಗೆ ರವಾನಿಸಲಾಗಿದೆ.
ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಿದ ನಂತರದಲ್ಲಿ ಈ ರೀತಿಯ ಸಮಸ್ಯೆಯಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದರೆ, ಸ್ಥಳೀಯ ನೀರಿನ ಸಮಸ್ಯೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ನೆರವಾದ ಶಾಸಕ ಬೇಳೂರು ಗೋಪಾಲಕೃಷ್ಣ:
ಅಸ್ವಸ್ಥರಾಗಿದ್ದ ಅಂಗನವಾಡಿ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲು ಪಟ್ಟಣದ ಆಂಬುಲೆನ್ಸ್ ಬೇರೆ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ತೆರಳಿತ್ತು. ಹಾಗಾಗಿ ಹೊಸನಗರದಿಂದ ಆಂಬುಲೆನ್ಸ್ ಬರಬೇಕಾಗಿತ್ತು. ಆಂಬುಲೆನ್ಸ್ ಲಭ್ಯವಿಲ್ಲದೇ ವಿಳಂಬವಾದ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ವಿಷಯ ತಿಳಿದ ಶಾಸಕ ಬೇಳೂರು ಗೋಪಾಲಕೃಷ್ಣ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಮೂಲಕ ಮಕ್ಕಳನ್ನು ಮೆಗ್ಗಾನ್ ಗೆ ಕಳುಹಿಸಿಕೊಟ್ಟರು. ಮೆಗ್ಗಾನ್ ನ ವೈದ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು.