ಸಾಗರ | ಮೊಬೈಲ್ ನೆಟ್ ವರ್ಕ್ ಕೊಟ್ಟು ಬಳಿಕ ಗಣತಿ ಮಾಡಿ: ನಾಲ್ಕು ಗ್ರಾಮಗಳ ಗ್ರಾಮಸ್ಥರಿಂದ ಪ್ರತಿಭಟನೆ
ಸಮಸ್ಯೆ ಪರಿಹರಿಸುವವರೆಗೆ ಸಮೀಕ್ಷೆಗೆ ಸಹಕರಿಸುವುದಿಲ್ಲ: ಗ್ರಾಮಸ್ಥರ ಪಟ್ಟು
ಶಿವಮೊಗ್ಗ: ಮೊಬೈಲ್ ನೆಟ್ ವರ್ಕ್ ಇಲ್ಲದ ಕಾರಣ ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸದಿರಲು ಶಿವಮೊಗ್ಗ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ನಿರ್ಧರಿಸಿದ್ದಾರೆ. ನಮ್ಮ ಗ್ರಾಮಗಳಿಗೆ ಮೊಬೈಲ್ ನೆಟ್ ವರ್ಕ್ ಕೊಟ್ಟು ಬಳಿಕ ಗಣತಿ ಮಾಡಿ ಎಂದು ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೂರು, ಕಲ್ಲುಕೊಪ್ಪ, ತೆಪ್ಪಗೋಡು ಮತ್ತು ಮುಳುಕೇರಿ ಗ್ರಾಮಸ್ಥರು ಆಗ್ರಹಿಸಿದರು.
ಈ ನಾಲ್ಕು ಗ್ರಾಮಗಳ ಗ್ರಾಮಸ್ಥರನ್ನು ಒಳಗೊಂಡ ನೆಟ್ ವರ್ಕ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಬರೂರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಗ್ರಾಮದಲ್ಲಿನ ನೆಟ್ ವರ್ಕ್ ಸಮಸ್ಯೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಗ್ರಾಮಗಳಿಗೆ ನೆಟ್ ವರ್ಕ್ ಕೊಟ್ಟು ಬಳಿಕ ಗಣತಿ ಮಾಡಿ, ಇಲ್ಲವಾದರೆ ಬೇಡ. ಜನಗಣತಿಗೆ ನಮ್ಮ ವಿರೋಧವಿಲ್ಲ. ಆದರೇ, ನೆಟ್ ವರ್ಕ್ ಬೇಕು. ಇಲ್ಲವಾದಲ್ಲಿ ಸಮೀಕ್ಷೆಗೆ ನಾವು ಸಹಕರಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಬಿಎಸ್ಸೆನ್ನೆಲ್ ಟವರ್ ಪುನಃ ಮಂಜೂರು ಮಾಡಬೇಕು. ನೆಟ್ ವರ್ಕ್ ಇಲ್ಲದೇ ಹೇಗೆ ಸಮೀಕ್ಷೆ ಮಾಡುತ್ತೀರಿ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ತಹಶೀಲ್ದಾರ್ ಮನವೊಲಿಕೆಗೂ ಜಗ್ಗದ ಪ್ರತಿಭಟನಾಕಾರರು:
ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಗ್ರಾಮಸ್ಥರ ಮನವೊಲಿಸಲು ಸ್ಥಳಕ್ಕೆ ಸಾಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಆಗಮಿಸಿದ್ದರು.
ಪ್ರತಿಭಟನಾನಿರತರ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ ತಹಶೀಲ್ದಾರ್, ಸಮೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದರು. ತಹಶೀಲ್ದಾರ್ ಮನವೊಲಿಕೆಗೂ ಜಗ್ಗದ ಗ್ರಾಮಸ್ಥರು, ಟವರ್ ಅಳವಡಿಸುವವರೆಗೂ ಸಮೀಕ್ಷೆಗೆ ಸಹಕರಿಸುವುದಿಲ್ಲ ಎಂದು ಪಟ್ಟುಹಿಡಿದ್ದಾರೆ.
ಮೂರು ದಿನಗಳ ಒಳಗೆ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು. ಸಮಸ್ಯೆ ಬಗೆಹರಿಯುವವರೆಗೆ ಸಮೀಕ್ಷೆಯಲ್ಲಿ ಭಾಗವಹಿಸದಿರಲು ಗ್ರಾಮಸ್ಥರ ನಿರ್ಧರಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ಬಿಗಿ ಭದ್ರತೆ ಒದಗಿಸಿದ್ದಾರೆ.