ಶಿವಮೊಗ್ಗ | ವೇತನಾನುದಾನ ನೀಡಲು ಒತ್ತಾಯ; 2ನೇ ದಿನಕ್ಕೆ ಕಾಲಿಟ್ಟ ಶಿಕ್ಷಕರ ಉಪವಾಸ ಸತ್ಯಾಗ್ರಹ
ಶಿವಮೊಗ್ಗ : ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಎಲ್ಲ ಭಾಗ್ಯಗಳ ಜೊತೆಗೆ ವೇತನಾನುದಾನ ಭಾಗ್ಯ ನೀಡುವಂತೆ ಕೋರಿ ಬುಧವಾರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಹೋರಾಟ ತೀವ್ರವಾಗಿದ್ದು ಮೂವರು ಶಿಕ್ಷಕರು, ಓರ್ವ ಶಿಕ್ಷಕಿ ಅಸ್ವಸ್ಥರಾಗಿ ಕುಸಿದುಬಿದ್ದ ಘಟನೆ ನಡೆದಿದ್ದು ಸ್ಥಳಕ್ಕೆ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಮಾತನಾಡಿ, 1995ರಿಂದ 2005ರ ವರೆಗೆ ಅನುದಾನರಹಿತ ಕನ್ನಡ ಮಾಧ್ಯಮದ ಶಾಲಾ-ಕಾಲೇಜುಗಳಿಗೆ ಎಲ್ಲ ಭಾಗ್ಯಗಳ ಜೊತೆ ವೇತನಾನುದಾನ ನೀಡುವಂತೆ ಕೋರಿ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಲವು ಬಾರಿ ಮನವಿ ನೀಡಿದ್ದೇವೆ. ಸಚಿವ ಮಧು ಬಂಗಾರಪ್ಪನವರು ಕೂಡ ರಾಜ್ಯೋತ್ಸವಕ್ಕೆ ಕನ್ನಡ ಶಾಲೆಯ ಉಳಿವಿಗಾಗಿ ನಮಗೆಲ್ಲರಿಗೂ ಶುಭ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ವಿಫಲವಾಗಿದೆ. ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಉಳಿದಿದೆ. ನಾವೆಲ್ಲರೂ ಸಿದ್ಧವಾಗಿಯೇ ಬಂದಿದ್ದೇವೆ. 10 ದಿನಗಳ ಹಿಂದೆಯೇ ಸುದ್ದಿಗೋಷ್ಠಿ ಮೂಲಕ ಶಿಕ್ಷಣ ಸಚಿವರ ತವರೂರಿನಲ್ಲಿ ಮಾಡು ಇಲ್ಲವೇ ಮಡಿ ರಾಜ್ಯಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದೆವು. ಸೌಜನ್ಯಕ್ಕಾಗಿ ಆದರೂ ಶಿಕ್ಷಣ ಸಚಿವರು ಸ್ಥಳಕ್ಕೆ ಬಂದಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ನಿನ್ನೆಯಿಂದ ರಾತ್ರಿಯಿಡೀ ಸೊಳ್ಳೆಯಿಂದ ಕಚ್ಚಿಸಿಕೊಂಡು ಚಳಿಯಲ್ಲಿ ನಡುಗುತ್ತಾ ಹೋರಾಟ ಮಾಡಿದರೂ ಕನಿಷ್ಠ ಪಕ್ಷ ಇಲ್ಲಿ ಒಂದು ದೀಪದ ವ್ಯವಸ್ಥೆ ಮಾಡಿಲ್ಲ. ಮಹಿಳಾ ಹೋರಾಟಗಾರರಿಗೆ ಶೌಚಾಲಯ ವ್ಯವಸ್ಥೆಯಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಶಿಕ್ಷಕರಿಗೆ ಈ ರೀತಿಯ ವ್ಯವಸ್ಥೆಯಾದರೆ ನಮ್ಮ ಸಮಸ್ಯೆ ಬಗೆಹರಿಯುವುದು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ತಮ್ಮೆಲ್ಲಾ ಸಮಸ್ಯೆಯ ಅರಿವಿದೆ. ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಸಚಿವರು ಸ್ಪಂದಿಸಿದ್ದಾರೆ. ದಯವಿಟ್ಟು ಉಪವಾಸ ಸತ್ಯಾಗ್ರಹ ವಾಪಸ್ ಪಡೆಯಿರಿ ಎಂದು ವಿನಂತಿಸಿದರು. ಬೆಳಗಾವಿ ಅಧಿವೇಶನದಲ್ಲಿ ನಿಮ್ಮ ಸಮಸ್ಯೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು. ಆ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಕುಸಿದು ಬಿದ್ದರು. ಅವರನ್ನು ಶಾಸಕರೇ ಆಂಬುಲೆನ್ಸ್‌ನಲ್ಲಿ ಚಿಕಿತ್ಸೆಗೆ ಕಳುಹಿಸಿಕೊಟ್ಟ ಘಟನೆಯೂ ನಡೆಯಿತು.
ಜಿಲ್ಲಾಧಿಕಾರಿ ಗಮನಕ್ಕೆ ತಂದ ಶಾಸಕರು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಂತರ ಬಂದ ಇನ್ನೋರ್ವ ಶಾಸಕ ಡಾ. ಧನಂಜಯ ಸರ್ಜಿ ಕೂಡ ಸಾಂತ್ವನ ಹೇಳಿ, ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಸಚಿವರ ಜೊತೆಗೆ ಮಾತನಾಡಿ, ಸಮಸ್ಯೆಯ ಬಗ್ಗೆ ವಿವರಿಸಿದರು.
ಈ ಸಂದರ್ಭ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳಿಂದ ಬಂದ ಶಿಕ್ಷಕ ಪ್ರಮುಖರು ಉಪಸ್ಥಿತರಿದ್ದರು. ನವಕರ್ನಾಟಕ ನಿರ್ಮಾಣ ವೇದಿಕೆಯ ಗೋ.ರಮೇಶ್ ಗೌಡ ಮತ್ತಿತರರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಪಟ್ಟು ಸಡಿಲಿಸದ ಪ್ರತಿಭಟನಾಕಾರರು :
ಈ ಅಧಿವೇಶನದಲ್ಲಿ ಮುಖ್ಯಮಂತ್ರಿಯೊಂದಿಗೆ ನಿಯೋಗ ತೆರಳಿ ಖಂಡಿತವಾಗಿಯೂ ಸಮಸ್ಯೆ ಬಗೆಹರಿಸೋಣ. ನನ್ನ ಗಮನಕ್ಕೆ ಈ ವಿಷಯ ಇದ್ದು ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ. ಉಪವಾಸ ಸತ್ಯಾಗ್ರಹ ಹಿಂಪಡೆಯಿರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. ಆದರೂ ಕನ್ನಡ ಶಿಕ್ಷಕರ ಒಕ್ಕೂಟ ಸಚಿವರೇ ಇಲ್ಲಿಗೆ ಬರಬೇಕು. ನಮಗೆ ಲಿಖಿತ ಭರವಸೆ ನೀಡಬೇಕು ನಾವು ಸತ್ತರೂ ಪರವಾಗಿಲ್ಲ. ನಮಗೆ ಆಶ್ವಾಸನೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಕನಿಷ್ಠ ನೇರವಾಗಿ ಹೋರಾಟಗಾರರೊಂದಿಗೆ ಖುದ್ದು ಸಚಿವರೇ ಮಾತನಾಡುವ ತನಕ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಬಿಸಿಲಿನಲ್ಲೇ ಹೋರಾಟ ಮುಂದುವರಿಸಿದ್ದಾರೆ.
ಹೋರಾಟಗಾರರಿಂದ ಮನವಿ ಪಡೆದು, ನಾನು ಈಗಾಗಲೇ ಸಚಿವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನನ್ನ ತಾಯಿ ಕೂಡ ಓರ್ವ ಶಿಕ್ಷಕಿ. ನನಗೆ ಸಮಸ್ಯೆಯ ಆಳದ ಅರಿವಿದೆ. ಶೌಚಾಲಯ ಮತ್ತು ವಿದ್ಯುತ್ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಇಲ್ಲಿ ರಾತ್ರಿ ಹೋರಾಟಗಳಿಗೆ ಅವಕಾಶವಿಲ್ಲ. ಆದರೂ ಮಹಿಳೆಯರು ಇರುವುದರಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು. ನಮ್ಮಿಂದ ಎಲ್ಲ ಸಹಕಾರ ನೀಡುತ್ತೇವೆ. ದಯವಿಟ್ಟು ಹೋರಾಟ ವಾಪಸ್ ಪಡೆಯಿರಿ. ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ.
ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ