ಸರಕಾರಗಳಿಂದ ಜನ ವಿರೋಧಿ, ಕಾರ್ಪೊರೇಟ್ ಪರ ನೀತಿ ಜಾರಿ ಆರೋಪ; ರೈತರು, ಕಾರ್ಮಿಕರಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ

Update: 2026-08-10 22:58 IST

ಶಿವಮೊಗ್ಗ : ‘ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ’ ಎಂಬ ಘೋಷಣೆಯಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ವತಿಯಿಂದ ಸೋಮವಾರ ಶಿವಪ್ಪನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ಚಳವಳಿ ನಡೆಸಲಾಯಿತು. ಈ ವೇಳೆ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದ ಘಟನೆಯೂ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರಕಾರ ಒಂದೆಡೆ ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಒಟ್ಟಾರೆ ಜನ ವಿರೋಧಿ ಕಾನೂನುಗಳನ್ನು, ನೀತಿಗಳನ್ನು ಜಾರಿ ಮಾಡುತ್ತಿರುವಾಗಲೇ ಇನ್ನೊಂದೆಡೆ ಜನತೆಯ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ, ಕಾರ್ಪೊರೇಟ್ ಭೂ ಕಬಳಿಕೆ ವಿರೋಧಿಸಿ, ಬೀಜ ಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ಹಾಗೂ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

ರಸಗೊಬ್ಬರ, ಡಿಸೇಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಎಲ್ಲ ವಲಯಗಳಲ್ಲಿ ಹೆಚ್ಚುತ್ತಿರುವ ಖಾಸಗೀಕರಣ ಮತ್ತು ಕಾರ್ಪೊರೇಟ್ ಶೋಷಣೆ ಮೇಲೆ ಸೂಕ್ತ ನಿಯಂತ್ರಣ ಹಾಕುವಂತೆ, ಬ್ಯಾಂಕ್, ವಿಮಾ, ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸುವಂತೆ ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಭೂಮಿಯನ್ನು ಅಂಬಾನಿ, ಅದಾನಿ ಮುಂತಾದ ದೇಶಿಯ ಹಾಗೂ ವಿದೇಶಿ ಕಂಪೆನಿಗಳ ಬಾಯಿಗೆ ಹಾಕುತ್ತಿದೆ. ಇದರಿಂದ ಇಡೀ ದೇಶದ ಸಮಸ್ತ ಕಾರ್ಮಿಕ ವರ್ಗವನ್ನು ಜೀತ ಪದ್ಧತಿಯ ಕಾಲಕ್ಕೆ ನೂಕಲಾಗುತ್ತಿದೆ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಸಿಐಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ, ಬಿಸಿಯೂಟ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹನುಮಮ್ಮ, ಡಿಎಸ್‌ಎಸ್ ಹಾಲೇಶಪ್ಪ, ಕರ್ನಾಟಕ ಜನ ಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಘವೇಂದ್ರ, ರಾಜ್ಯ ರೈತ ಸಂಘದ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ಪ್ರಮುಖರಾದ ಶೇಷಪ್ಪ, ಚಂದ್ರಪ್ಪ, ಹರೀಶ್ ಇನ್ನಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News