ಶಿವಮೊಗ್ಗ: ಪರಿಸರ ದಸರಾ ಕಾರ್ಯಕ್ರಮಕ್ಕೆ ಚಾಲನೆ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ - 2025 ರ ಅಂಗವಾಗಿ, ಮಹಾನಗರ ಪಾಲಿಕೆ ಆವರಣದಲ್ಲಿ ಪರಿಸರ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ, ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಸಂಕೇತವಾಗಿ ಆಯೋಜಿಸಲಾಗಿದ್ದ ಸೈಕಲ್ ಜಾಥಾವನ್ನು ಉದ್ಘಾಟಿಸುವುದರ ಪರಿಸರ ದಸರಾ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ನಾಗರೀಕರೆಲ್ಲರೂ ಬಳಸಬೇಕು. ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆಯಲ್ಲಿ ನಾವು ನೀವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರಾಸಕ್ತರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಸೈಕಲ್ ಜಾಥಾದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.