×
Ad

ಶಿವಮೊಗ್ಗ: ಬಿಳ್ಳೋಡಿ ಗ್ರಾಮದಲ್ಲಿ ಐವರಿಗೆ ಕೆಎಫ್‌ಡಿ ಪಾಸಿಟಿವ್

ಚಿಕ್ಕಮಗಳೂರಿನಲ್ಲೂ ಮೊದಲ ಪ್ರಕರಣ ದಾಖಲು

Update: 2025-12-12 18:40 IST

ಶಿವಮೊಗ್ಗ: ಕಳೆದ ವಾರ ಹೊಸನಗರ ತಾಲ್ಲೂಕಿನ ಬಿಳ್ಳೋಡಿ ಗ್ರಾಮದಲ್ಲಿ 55 ವರ್ಷದ ಮಹಿಳೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಕಾಣಿಸಿಕೊಂಡಿತ್ತು. ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇನ್ನೂ ನಾಲ್ವರಿಗೆ ಪಾಸಿಟಿವ್ ಬಂದಿದೆ.

ಬಿಳ್ಳೋಡಿ ಗ್ರಾಮದಲ್ಲಿ ಪಾಸಿಟಿವ್ ಬಂದಿರುವ ಐವರಲ್ಲಿ ನಾಲ್ವರು ಮಹಿಳೆಯರು, ಓರ್ವ ಪುರುಷ ಇದ್ದು ಎಲ್ಲರೂ ಆರೋಗ್ಯವಾಗಿದ್ದಾರೆ. ಜನವರಿ ಆರಂಭದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದವು. ಈ ಬಾರಿ ನವೆಂಬರ್‌ನಿಂದಲೇ ಸರ್ವೇಕ್ಷಣೆ ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ನಿರೀಕ್ಷೆ ಮಾಡದ ರೀತಿಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಮಂಗನ ಕಾಯಿಲೆಗೆ ಲಸಿಕೆ ನಿಲ್ಲಿಸಿ ಮೂರು ವರ್ಷ ಕಳೆದಿದ್ದು ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. 

ಜಿಲ್ಲೆಯಾದ್ಯಂತ ಹಾಗೂ ಮಲೆನಾಡು ಪ್ರದೇಶಗಳಿಗೆ ಈಗ ಅಡಕೆ ಕೊಯ್ಲು ಆರಂಭವಾಗಿದ್ದು ಚಟುವಟಿಕೆ ಗರಿಗೆದರಿದೆ. ಬಿಳ್ಳೋಡಿ ಗ್ರಾಮದಲ್ಲಿ ಪಾಸಿಟಿವ್ ಬಂದಿರುವ ಐವರಲ್ಲಿ ನಾಲ್ವರು ಅಡಕೆ ತೋಟ ಹಾಗೂ ಕಾಡಿನ ಸಂಪರ್ಕ ಹೊಂದಿದವರೆ. ಕಳೆದ ಅವಧಿಯಲ್ಲೂ ಕೂಡ ಅಡಕೆ ತೋಟದ ಕೆಲಸಕ್ಕೆ ಹೋದವರಿಗೆ ಪಾಸಿಟಿವ್ ಬಂದಿತ್ತು. ಕಾಡಂಚಿನ ತೋಟಗಳಲ್ಲಿ, ಕಾಡಿನ ಸಂಪರ್ಕ ಹೊಂದಿರುವ ಕೃಷಿಕುಟುಂಬಗಳಿಗೆ ಸೋಂಕಿತ ಉಣುಗು ಕಚ್ಚಿ ವೈರಸ್ ಹರಡುತ್ತಿದೆ. ಕಳೆದ ಅವಧಿಯಲ್ಲಿ ಇಬ್ಬರೂ ಮೃತಪಟ್ಟಿದ್ದರು. ಈ ಬಾರಿ ಅವಧಿಗೆ ಮುನ್ನವೇ ಕೆಎಫ್‌ಡಿ ಭೀತಿ ಹುಟ್ಟಿಸಿದೆ.

ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೊದಲ ಪ್ರಕರಣವಾಗಿದೆ. ಪಾಸಿಟಿವ್ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಸರ್ವೇಕ್ಷಣೆ ಹೆಚ್ಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News