×
Ad

ಶಿವಮೊಗ್ಗ: ಕೆಡಿಪಿ ಸಭೆಯಲ್ಲಿ ಗಾಂಜಾ,ಓಸಿ-ಮಟ್ಕಾ ಚರ್ಚೆ

ಸಂಪೂರ್ಣ ಬಂದ್ ಮಾಡಿಸಲು ಸಚಿವ ಮಧು ಬಂಗಾರಪ್ಪ ಸೂಚನೆ

Update: 2025-11-29 00:16 IST

ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದೆ. ಓಸಿ, ಮಟ್ಕಾ ದಂಧೆ ಎಲ್ಲೆ ಮೀರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೇ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ, ಪೊಲೀಸ್ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಜಿಲ್ಲಾ ಪಂಚಾಯತ್ ನ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು.

ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ,ಓಸಿ,ಮಟ್ಕಾ ದಂಧೆ ನಡೆಯುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ.ಈ ಅಕ್ರಮದಲ್ಲಿ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಅವರು ಪ್ರಶ್ನಿಸಿದರು.

ಗಾಂಜಾ ಅಮಲಿಗೆ ಯುವ ಜನಾಂಗ ಬಲಿಯಾಗುತ್ತಿದೆ. ಈ ಅಕ್ರಮವನ್ನು ತಡೆಯದಿದ್ದರೆ ದೊಡ್ಡ ಅಪಾಯವಿದೆ.ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ,ಓಸಿ,ಮಟ್ಕಾ ದಂಧೆಗೆ ಸಂಪೂರ್ಣ ಬಂದ್ ಮಾಡಬೇಕು.ಗಾಂಜಾ ಮಾರಾಟದಲ್ಲಿ ಭಾಗಿಯಾದವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮಾಜಿ ಗೃಹ ಸಚಿವರೂ ಆದ ಶಾಸಕ ಅರಗ ಜ್ಞಾನೇಂದ್ರ ಅವರು, ಪೊಲೀಸರ ಗಮನಕ್ಕೆ ಬಾರದೇ ಓಸಿ,ಮಟ್ಕಾ ದಂಧೆಗಳು ನಡೆಯುವುದಿಲ್ಲ,ಈ ಅಕ್ರಮ ನಡೆಸುವವರ ಹಿಂದೆ ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ಆರೋಪಿಸಿದರು.

ಶಾಸಕ ಚನ್ನಬಸಪ್ಪ ಮಾತನಾಡಿ,ಇತ್ತೀಚೆಗೆ ನಗರದ ಪ್ರತಿಷ್ಟಿತ ಬಡಾವಣೆಯಲ್ಲಿನ ಯುವತಿಯೊಬ್ಬಳು ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಈ ವಿಷಯ ತಂದೆ-ತಾಯಿಯ ಗಮನಕ್ಕೆ ಬಂದಾಗ ಮಗಳ ವಿರುದ್ದವೇ ದೂರು ಕೊಡಲು ಮುಂದಾಗಿದ್ದರು. ದೂರು ಕೊಡಲು ಮುಂದಾಗ ತಂದೆ-ತಾಯಿಯನ್ನೇ ಅಡ್ಡಗಟ್ಟಿ ದೂರು ಕೊಡದಂತೆ ಮಾಡಿದ್ದಳು. ನಂತರ ಆ ಹೆಣ್ಣುಮಗಳ ಮೊಬೈಲ್ ತಪಾಸಣೆ ನಡೆಸಿದಾಗ ಮೊಬೈಲ್ನಿಂದ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಿದಾಗ ಭಯಾನಕ ಅಂಶಗಳು ಹೊರಬಂದವು ಎಂದು ಸಭೆಯ ಗಮನಕ್ಕೆ ತಂದರು.

ಗಾಂಜಾ ವಿಚಾರದಲ್ಲಿ ದೂರು ನೀಡಲು ಹೋದರೆ ದೂರು ನೀಡಿದವರ ಮೇಲೆಯೇ ಹಲ್ಲೆ ನಡೆಯುತ್ತದೆ ಎಂದರೆ ಗಾಂಜಾ ಮಾಫಿಯಾ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಮಾತನಾಡಿ,ಕಳೆದ ವರ್ಷ 431 ಪ್ರಕರಣ ದಾಖಲಾಗಿದ್ದವು,ಈ ಬಾರಿ 231 ಪ್ರಕರಣ ದಾಖಲಿಸಿದ್ದೇವೆ.ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಆಗಿದೆ ಎಂದರು. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಸ್ಪಷ್ಟೀಕರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಚನ್ನಬಸಪ್ಪ ಅವರು, ಗಾಂಜಾವನ್ನು ಸಂಪೂರ್ಣವಾಗಿ ಕಡಿವಾಣ ಹಾಕದಿದ್ದರೆ ಪೊಲೀಸ್ ಇಲಾಖೆ ಯಾಕೆ ಬೇಕು.ಮುಚ್ಚಿಬಿಡಿ ಎಂದು ಆಕ್ರೋಶ ಹೊರಹಾಕಿದರು.

ನಮಗೆ ಯುವ ಜನಾಂಗದ ಭವಿಷ್ಯ ಮುಖ್ಯ,ಗಾಂಜಾ. ಓಸಿ,ಮಟ್ಕಾ ದಂಧೆಯಲ್ಲಿ ಭಾಗಿಯಾದವರ ವಿರುದ್ದ ನಿರ್ಧಾಕ್ಷಿಣವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News