×
Ad

Shivamogga | ಪತ್ನಿ ಜತೆಗೆ ಅನೈತಿಕ ಸಂಬಂಧ ಆರೋಪ; ತಮ್ಮನನ್ನೇ ಹತ್ಯೆಗೈದು ಹೂತುಹಾಕಿದ ಅಣ್ಣ

Update: 2025-12-17 13:34 IST

ಶಿವಮೊಗ್ಗ : ಪತ್ನಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಹತ್ಯೆಗೈದು ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದ ವ್ಯಕ್ತಿ. ಆತನ ಹಿರಿಯ ಸಹೋದರ ಮಾಲತೇಶ್ ಕೊಲೆ ಆರೋಪಿ.

ಪುತ್ರ ರಾಮಚಂದ್ರ ಕಳೆದ ಸೆಪ್ಟೆಂಬರ್​ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕೆಲವು ದಿನಗಳ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣದಲ್ಲಿ ಕಾಣೆಯಾದವನ ಪತ್ತೆಯಾಗಿರಲಿಲ್ಲ. ಆದಾಗ್ಯೂ ಅನುಮಾನ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ಜಾಡು ಬದಲಿಸಿದ್ದರು. ಅಲ್ಲದೆ, ಪ್ರಕರಣದಲ್ಲಿ ಸಾಕಷ್ಟು ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ರಾಮಚಂದ್ರ ಅವರ ಸಹೋದರ ಮಾಲತೇಶ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.

ಪೊಲೀಸರ ವಿಚಾರಣೆಯ ವೇಳೆ ಆರೋಪಿ ಮಾಲತೇಶ್​ ನಡೆದಿದ್ದನ್ನು ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ. ತಮ್ಮ ರಾಮಚಂದ್ರ ತನ್ನ ಪತ್ನಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ಮಾಲತೇಶ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಜೇಡಗೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ತೋಟ ಕಾಯಲು ಮಾಲತೇಶ್ ಹಾಗೂ ಅವರ ಹೆಂಡತಿ ನೆಲೆಸಿದ್ದರು.  ರಾಮಚಂದ್ರರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ ಆತನನ್ನು ಕೊಲೆ ಮಾಡಿ ಹೂತು ಹಾಕಿದ್ದ. ಇನ್ನೂ ನಿನ್ನೆ ಮಂಗಳವಾರ ಪೊಲೀಸರು ಆಡಳಿತ ವ್ಯವಸ್ಥೆಯ ಸಮಕ್ಷಮದಲ್ಲಿ ಕಳೇಬರ ಹೊರತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಎಸ್ಪಿ ಪ್ರತಿಕ್ರಿಯೆ:

"ತನ್ನ ತಮ್ಮನನ್ನು ಕೊಲೆ ಮಾಡಲು ಒಂದು ತಿಂಗಳ ಹಿಂದೆಯೆ ಯೋಜನೆ​ ಮಾಡಿಕೊಂಡಿದ್ದ ಅಣ್ಣ ಮಾಲತೇಶ್​, ಆತನಿಗೆ ತನ್ನ ಪತ್ನಿಯ ಜೊತೆಗೆ ಸಲುಗೆಯಿಂದ ಇರಬೇಡ ಎಂದು ಎಚ್ಚರಿಕೆಯನ್ನು ನೀಡಿದ್ದ. ಆದರೆ ರಾಮಚಂದ್ರ ಅಣ್ಣನ ಮಾತನ್ನ ಕೇಳಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಲು ತೀರ್ಮಾನಿಸಿದ ಮಾಲತೇಶ್​, ರಾಮಚಂದ್ರನಿಗೆ ಮದುವೆ ಮಾಡುವ ಪ್ರಸ್ತಾಪ ಮಾಡುತ್ತಾನೆ. ಅಲ್ಲದೆ, ಮದುವೆ ಮಾಡಿಸಲು ಸ್ವಾಮೀಜಿಯವರು ಪೂಜೆ ಹೇಳಿದ್ದಾರೆ ಎಂದು ರಾಮಚಂದ್ರನಲ್ಲಿ ಹೇಳಿದ್ದಾನೆ. ಅಲ್ಲದೆ, ಒಂದೆರೆಡು ಬಾರಿ ಸ್ವಾಮೀಜಿಯನ್ನು ಭೇಟಿ ಮಾಡಿಸಿ, ಅವರು ಹೇಳಿದ ಪೂಜೆಯನ್ನು ಮಾಡಿಸುತ್ತಾನೆ. ಕೊನೆಯಲ್ಲಿ ಇನ್ನೊಂದು ಪೂಜೆ ಮಾಡಬೇಕು ಎಂದು ಹೇಳಿ ಸೊರಬ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವ್ಯಕ್ತಿಯೊಬ್ಬರಿಗೆ ಸೇರಿದ ತೋಟಕ್ಕೆ ತನ್ನ ತಮ್ಮನನ್ನು ಕರೆಸಿಕೊಳ್ಳುತ್ತಾನೆ. ಅಲ್ಲಿ ಆತನಿಗೆ ಮದ್ಯಪಾನ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡುತ್ತಾನೆ. ಆನಂತರ ಆ ಮೊದಲೇ ತೆಗೆದಿದ್ದ ಗುಂಡಿಯಲ್ಲಿ ರಾಮಚಂದ್ರನನ್ನು ಹೂತು ಹಾಕಿದ ಮಾಲತೇಶ್​ ಮರುದಿನ ಒಂದಿಬ್ಬರು ಕೆಲಸಗಾರರನ್ನು ಕರೆದು ತಂದು ಗುಂಡಿಯನ್ನು ಪೂರ್ಣವಾಗಿ ಮುಚ್ಚಿದ್ದ. ಇಷ್ಟೆ ಅಲ್ಲದೆ, ತಾನೆ ಖುದ್ದಾಗಿ ಬಂದು ಪೊಲೀಸ್ ಠಾಣೆಯಲ್ಲಿ ತನ್ನ ತಮ್ಮ ಕಾಣುತ್ತಿಲ್ಲ ಎಂದು ದೂರು ನೀಡಿದ್ದ. ಈ ನಿಟ್ಟಿನಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿ.ಕೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News