ಹವಾಮಾನ ಬದಲಾವಣೆ ರಾಜ್ಯ ಕ್ರಿಯಾ ಯೋಜನೆ- ಎಂಪ್ರಿ ವರದಿಯ ವೈರುಧ್ಯಗಳು

Update: 2024-01-05 05:02 GMT
Editor : Ismail | Byline : ಕೆ.ಪಿ. ಸುರೇಶ

ಈ ವರದಿಯು ಹವಾಮಾನ ಬದಲಾವಣೆಯ ಭವಿಷ್ಯದ ಸಂಭಾವ್ಯ ಪರಿಣಾಮಗಳನ್ನು ಮುಂದಿಡುತ್ತಾ ಇದನ್ನೆದುರಿಸಲು ಸಜ್ಜಾಗುವ ಬಗೆ ಹೇಗೆ ಎಂಬುದಕ್ಕೆ ಈಗಾಗಲೇ ಸರಕಾರ ಕೃಷಿ, ತೋಟಗಾರಿಕೆಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಹವಾಮಾನ ಬದಲಾವಣೆಯ ಸ್ಪಂದನಾ ಯೋಜನೆ ಎಂಬಂತೆ ಜೋಡಿಸಿ ಬಿಡುತ್ತದೆ.

ಕರ್ನಾಟಕದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಒPಖI) ಹವಾಮಾನ ಬದಲಾವಣೆಗೆ ಕರ್ನಾಟಕ ರಾಜ್ಯದ ಕ್ರಿಯಾ ಯೋಜನೆ ಎಂಬ ವರದಿಯನ್ನು ಸಿದ್ಧಪಡಿಸಿದೆ.

ಮುಂದಿನ ದಶಕಗಳಲ್ಲಿ ಅಲ್ಪಕಾಲೀನ ಮತ್ತು ದೀರ್ಘ ಕಾಲೀನ ಪರಿಣಾಮಗಳೇನಾಗಬಹುದು ಎಂಬುದನ್ನು ಸಂಶೋಧನಾ ಮಾದರಿಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಕರ್ನಾಟಕದ ಪ್ರಸ್ತುತ ಸನ್ನಿವೇಶವನ್ನು ಸೂಚಿಯಾಗಿ ಇಟ್ಟುಕೊಂಡು ಭವಿಷ್ಯದ ಸಾಧ್ಯತೆಗಳನ್ನು ಮುಂದಿಡಲಾಗಿದೆ. ಹಾಗೆಯೇ ಇದನ್ನು ಕಡಿಮೆ ಮಾಡಲು, ಹೊಂದಿಕೊಳ್ಳಲು, ಎದುರಿಸಲು ಏನೇನು ಮಾಡಬಹುದು ಎಂಬ ಬಗ್ಗೆಯೂ ಸರಕಾರಿ ಯೋಜನೆಗಳ ಚೌಕಟ್ಟಿನಲ್ಲಿ ಚರ್ಚಿಸಲಾಗಿದೆ.

ಈ ವರದಿಯಲ್ಲಿ ಪ್ರಸ್ತುತಪಡಿಸಲಾದ ಭವಿಷ್ಯದ ಸಾಧ್ಯತಾ ಮಾದರಿಗಳು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಹೊಮ್ಮಿರುವ ಕಾರಣ ಇವುಗಳ ವೈಧಾನಿಕ ದೋಶಗಳ ಬಗ್ಗೆ ಹೆಚ್ಚೇನೂ ಮಾತಾಡಲಾಗದು. ಆದರೆ ಇದರಿಂದ ಹೊಮ್ಮಿರುವ ಫಲಿತಾಂಶಗಳನ್ನು ಚರ್ಚಿಸಬೇಕಾಗಿದೆ.

ಈ ವರದಿಯಲ್ಲಿ ಮಳೆಯಲ್ಲಾಗುವ ವ್ಯತ್ಯಯಗಳೇನು ಎಂಬುದು ಮುಖ್ಯ ಭಾಗ; ಹಾಗೆಯೇ ಕೃಷಿಯ ಮೇಲೆ, ಅಂದರೆ ಬೆಳೆಗಳ ಉತ್ಪಾದಕತೆಯ ಕುರಿತಾದ ವಿವರಗಳ ಭಾಗ ಇನ್ನೂ ಮುಖ್ಯವೆಂದು ಭಾವಿಸಿ ಈ ಟಿಪ್ಪಣಿ.

ಈ ವರದಿ ಪ್ರಕಾರ

ಕಳೆದ ಒಂದೆರಡು ದಶಕಗಳಲ್ಲಿ ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ.(ಶೇ. 15ರಿಂದ ಶೇ.25ರವರೆಗೆ) ಮುಖ್ಯವಾಗಿ ಉತ್ತರದ ಜಿಲ್ಲೆಗಳಲ್ಲಿ ಮತ್ತು ದಕ್ಷಿಣದ ತುಮಕೂರು, ಚಾಮರಾಜನಗರ, ಚಿತ್ರದುರ್ಗಗಳಲ್ಲೂ ಶೇ.10ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಈ ಹೆಚ್ಚಳ ಶೇ.25ರಷ್ಟು.

ಈ ಹಿನ್ನೆಲೆಯಲ್ಲಿ ಅಲ್ಪಕಾಲೀನ (ಅಂದರೆ 2030ರ ದಶಕ) ಮುಂಗಾಣ್ಕೆಯ ಎರಡು ಮಾದರಿಗಳನ್ನು ಈ ವರದಿ ಪ್ರಸ್ತುತಪಡಿಸಿದೆ. ಇವು ಸಾಧ್ಯತೆಗಳ ಪ್ರೊಜೆಕ್ಷನ್.

ಮೊದಲ ಮಾದರಿ ಪ್ರಕಾರ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿಗಳಲ್ಲಿ ಶೇ. 5-10ರಷ್ಟು ಮಳೆ ಹೆಚ್ಚಾಗಲಿದೆ. ಪಶ್ಚಿಮ ಘಟ್ಟ ಮತ್ತು ಕರಾವಳಿಗಳಲ್ಲಿ ಈ ಪ್ರಮಾಣ ಶೇ.15-20ರ ವರೆಗೆ ಹೆಚ್ಚಲಿದೆ. ಇನ್ನೊಂದು ಮಾದರಿಯ ಪ್ರಕಾರ ಉತ್ತರದ ಜಿಲ್ಲೆಗಳಲ್ಲಿ ಶೇ.10ರಿಂದ 15ರ ವರೆಗೆ ಹೆಚ್ಚಳವಾದರೆ, ಬೀದರ್, ಕಲಬುರಗಿಯ ಕೆಲವು ಭಾಗಗಳೂ, ಬೆಳಗಾವಿ, ವಿಜಯಪುರ ಹಾಗೂ ಪಶ್ಚಿಮ ಘಟ್ಟದ ಭಾಗಗಳಾದ ಚಿಕ್ಕಮಗಳೂರು, ಹಾಸನ ಶಿವಮೊಗ್ಗಗಳಲ್ಲಿ ಶೇ.15-20ರಷ್ಟು ಹೆಚ್ಚುವರಿ ಮಳೆಯಾಗಬಹುದು. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲಿ ಶೇ.20-25ರಷ್ಟು ಅಧಿಕ ಮಳೆ ಬೀಳಬಹುದು.

ಮಳೆದಿನಗಳಲ್ಲೂ ಹೆಚ್ಚಳದ ಸಾಧ್ಯತೆಯನ್ನು ಈ ವರದಿ ಹೇಳಿದೆ.

ಮೊದಲನೆಯ ಲೆಕ್ಕಾಚಾರದ ಪ್ರಕಾರ 100 ಸೆ.ಮೀ. ಸರಾಸರಿ ಮಳೆಯಾಗುವ ಜಿಲ್ಲೆಗಳಲ್ಲಿ ಮಳೆ ದಿನಗಳ ಪ್ರಮಾಣ 7 ಜಿಲ್ಲೆಗಳಲ್ಲಿ ಮೂರು ದಿನ ಹೆಚ್ಚಲಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ ಮಳೆದಿನಗಳ ಪ್ರಮಾಣ 2-9 ದಿನಗಳ ವರೆಗೆ ಹೆಚ್ಚಲಿದೆ.

ತೀವ್ರ ಮಳೆ ಇತ್ತೀಚಿನ ದಿನಗಳಲ್ಲಿ ಹಲವು ಜಿಲ್ಲೆಗಳನ್ನು ಕಾಡಿದೆ. ದಿನಕ್ಕೆ ಸರಾಸರಿ 5-10 ಸೆ.ಮೀ. ಮಳೆಯಾದರೆ ಅದನ್ನು ‘ತೀವ್ರ ಮಳೆ’ ಎಂದು ಭಾವಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇಂತಹ 5-6 ತೀವ್ರ ಮಳೆ ದಿನಗಳು ಸೃಷ್ಟಿಯಾಗಲಿವೆ. ಆದರೆ ಇದು ಬಹುತೇಕ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಸೀಮಿತ.

ಕುತೂಹಲಕಾರಿಯಾಗಿ, ಮೊದಲ ಲೆಕ್ಕಾಚಾರದ ಪ್ರಕಾರ ಬರಗಾಲದ ವರ್ಷಗಳು ರಾಜ್ಯಾದ್ಯಂತ ಕಡಿಮೆಯಾಗಲಿವೆ.

2ನೇ ಲೆಕ್ಕಾಚಾರದ ಪ್ರಕಾರ, 1-4 ವರ್ಷಗಳಷ್ಟು ಬರಗಾಲದ ವರ್ಷಗಳ ಸಂಖ್ಯೆ ಕಡಿಮೆಯಾಗಲಿದೆ.

ಈ ವರದಿಯ ಇನ್ನೊಂದು ಗಮನಾರ್ಹ ಫಲಿತಾಂಶವೆಂದರೆ, ವಿವಿಧ ಬೆಳೆಗಳ ಉತ್ಪಾದಕತೆಯ ಅಂಶ.

ಕಡಲೆಯ ಉತ್ಪಾದಕತೆ ಬಿಜಾಪುರ, ಕಲಬುರಗಿ, ಕೊಪ್ಪಳ, ಮಂಡ್ಯ, ತುಮಕೂರು, ಯಾದಗಿರಿಗಳಲ್ಲಿ ಶೇ. 44ರಷ್ಟು ಇಳಿಕೆಯಾದರೆ, ಬೆಳಗಾವಿ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ, ಧಾರವಾಡ, ಗದಗ, ಹಾವೇರಿ ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಶೇ. 50ರಷ್ಟು ಇಳುವರಿ ಹೆಚ್ಚಲಿದೆ.

ಮೆಕ್ಕೆಜೋಳದ ಇಳುವರಿ ಚಿಕ್ಕಮಗಳೂರು, ಕೊಡಗು, ಮಂಡ್ಯ, ಶಿವಮೊಗ್ಗಗಳಲ್ಲಿ ಶೇ. 21ರಷ್ಟು ಇಳಿಕೆಯಾದರೆ, ಉಳಿದೆಲ್ಲಾ ಜಿಲ್ಲೆಗಳಲ್ಲೂ ಶೇ. 68ರಷ್ಟು ಇಳುವರಿ ಹೆಚ್ಚಲಿದೆ.

ಜೋಳದ ಬೆಳೆಯಲ್ಲಿ ಬೆಳಗಾವಿ, ಚಿತ್ರದುರ್ಗ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಶೇ.22ರಷ್ಟು ಇಳುವರಿ ಕುಂಠಿತವಾದರೆ, ಬಳ್ಳಾರಿ, ಬೀದರ್, ಬಿಜಾಪುರ ಧಾರವಾಡ, ಕಲಬುರ್ಗಿ, ರಾಯಚೂರು, ತುಮಕೂರು, ಯಾದಗಿರಿಗಳಲ್ಲಿ ಶೇ.120ರಷ್ಟು ಹೆಚ್ಚಾಗಲಿದೆ.

ಸೋಯಾಬೀನ್ ಬೆಳೆಯಲ್ಲಿ ಹಾವೇರಿಯಲ್ಲಿ ಮಾತ್ರ ಶೇ.14ರಷ್ಟು ಇಳುವರಿ ಕುಂಠಿತವಾದರೆ ಉಳಿದ ಜಿಲ್ಲೆಗಳಲ್ಲಿ ಶೇ.50ರಷ್ಟು ಇಳುವರಿ ಹೆಚ್ಚಳವಾಗಲಿದೆ.

ರಾಗಿಯಲ್ಲಿ ದಕ್ಷಿಣ ಕನ್ನಡ, ಉತ್ತರಕನ್ನಡ, ದಾವಣಗೆರೆ, ಧಾರವಾಡಗಳಲ್ಲಿ ಇಳುವರಿ ಶೇ.33ರಷ್ಟು ಕಡಿಮೆಯದರೆ, ಉಳಿದ ಜಿಲ್ಲೆಗಳಲ್ಲಿ ಶೇ.60ರಷ್ಟು ಹೆಚ್ಚಳವಾಗಲಿದೆ.

ಹವಾಮಾನ ಬದಲಾವಣೆ ಪಶು ಸಂಗೋಪನೆಯ ಮೇಲೆ ಗಾಢ ಪರಿಣಾಮ ಬೀರಲಿದೆ. ಅದರಲ್ಲೂ ಉಷ್ಣತೆಯ ಹೆಚ್ಚಳ, ಮೇವು ಮತ್ತು ನೀರಿನ ಅಭಾವ ಪಶು ಸಂಗೋಪನೆಗೆ ತೊಂದರೆ ಮಾಡಲಿದೆ ಎಂದು ವರದಿ ಹೇಳುತ್ತಾ, ಕರ್ನಾಟಕದಲ್ಲಿ ಮಾತ್ರಾ ಇಂತಹ ಯಾವ ಪರಿಣಾಮಗಳೂ ಆಗದು ಎಂದು ಹೇಳುತ್ತದೆ.ಹಾಲಿನ ಉತ್ಪಾದನೆಯಲ್ಲಾಗುತ್ತಿರುವ ಹೆಚ್ಚಳವನ್ನೇ ಈ ವರದಿ ಉಲ್ಲೇಖಿಸುತ್ತದೆ. (2017ರ ಉತ್ಪಾದನೆ 2030ರ ವೇಳೆಗೆ ಎರಡೂವರೆ ಪಟ್ಟು ಹೆಚ್ಚಲಿದೆ.)

ಈ ವರದಿ ನೋಡಿದರೆ ಹವಾಮಾನ ಬದಲಾವಣೆ ಕರ್ನಾಟಕದ ಮಟ್ಟಿಗಂತೂ ಅಂತಹ ಆತಂಕಕಾರಿ ಸಂಗತಿ ಅಲ್ಲ ಅನ್ನಿಸುತ್ತದೆ.

ಮಳೆಯ ಕುರಿತಾದ ಮುಂಗಾಣ್ಕೆ ಬಗ್ಗೆ, ಮುಂಗಾರಿನ ಮಳೆ ಯಥೇಚ್ಛ ಬೀಳುವ ಸಾಧ್ಯತೆಯನ್ನು ಈ ವರದಿ ಹೇಳುತ್ತದೆ. ಆದರೆ ಹಿಂಗಾರು ಮಳೆ ಕೈಕೊಡುವ ಸಾಧ್ಯತೆಯನ್ನು ಈ ವರದಿ ಮುಂದಿಡುತ್ತದೆ.

ತಾಂತ್ರಿಕವಾಗಿ ಇದು ಬಹು ಮುಖ್ಯವಾದ ಸೂಚನೆ. ಮಣ್ಣಿನಲ್ಲಿ ನೀರಿನ ಲಭ್ಯತೆಯ ಸಾಮರ್ಥ್ಯ ಎಂಬ ಅಂಶವೊಂದಿದೆ. ಅಂದರೆ ಸಸ್ಯವೊಂದು ನೀರನ್ನು ಬಳಸುತ್ತಿದ್ದಂತೆ ಮಣ್ಣಿನಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಆಗ ಆ ಮಣ್ಣಿನಲ್ಲಿ ಸಾಕಷ್ಟು ನೀರಿನ ಲಭ್ಯತೆ ಇರಬೇಕು, ಇಲ್ಲಾ, ನೀರು ಮತ್ತೆ ಮಣ್ಣಿಗೆ ದೊರೆಯಬೇಕು. ಮುಂಗಾರು ಎಷ್ಟೇ ಸುರಿದರೂ ಮೇಲ್ಮೈ ಮಣ್ಣು ಆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕೊಂದು ಮಿತಿ ಇದೆ. ಈ ನೀರು ಒಂದೋ ಇಳಿದು ಹೋಗುತ್ತದೆ. ಇಲ್ಲಾ ಆವಿಯಾಗುತ್ತದೆ. ಇದರ ಮರುಪೂರಣ ಮಳೆಯ ಮೂಲಕವೇ ನಡೆದರೆ ಬಚಾವ್. ಅಂದರೆ ಬಿಟ್ಟೂ ಬಿಟ್ಟೂ ಮಳೆ ಸುರಿದರೆ ಮಣ್ಣಿನಲ್ಲಿರುವ ನೀರಿನ ಪ್ರಮಾಣ ಮರುಪೂರಣವಾಗಿದೆ ಎಂದರ್ಥ. ಹಿಂಗಾರು ಮಳೆ ಮುಖ್ಯವಾಗುವುದು ಈ ಕಾರಣಕ್ಕೆ.

ಈ ವರದಿ ಈ ಮಳೆ ಕುಂಠಿತವಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಈ ಎಚ್ಚರಿಕೆಗೆ ತಕ್ಕ ಕಾರ್ಯ ಯೋಜನೆ ಏನು? ಈ ಬಗ್ಗೆ ವರದಿ ತುರ್ತು ಸ್ಪಂದನೆಯನ್ನೇನೂ ಹೇಳುವುದಿಲ್ಲ.

ಇನ್ನು ಹಲವು ಸೀಸನಲ್ ಬೆಳೆಗಳ ಉತ್ಪಾದಕತೆ ಗಣನೀಯವಾಗಿ ಹೆಚ್ಚುವ ಸಾಧ್ಯತೆಯನ್ನು ಈ ವರದಿ ಪ್ರಸ್ತುತಪಡಿಸುತ್ತದೆ.

ಆದರೆ ಈ ಪಟ್ಟಿಯಲ್ಲಿ ಒಂದು ವಿಚಿತ್ರ ವೈಧಾನಿಕ ದೋಷವೊಂದು ನನಗೆ ಗೋಚರಿಸಿತು. ಉದಾ: ರಾಗಿ ಬೆಳೆಯ ಉತ್ಪಾದಕತೆ ಕುಂಠಿತವಾಗುವ ಜಿಲ್ಲೆಗಳ ಪಟ್ಟಿಯಲ್ಲಿ ದ.ಕ., ಉತ್ತರ ಕನ್ನಡಗಳೂ ಇವೆ!! ಈ ಜಿಲ್ಲೆಗಳಲ್ಲಿ ರಾಗಿ ಬಿಡಿ ಭತ್ತದ ಬೇಸಾಯವೇ ಕುಗ್ಗುತ್ತಿದೆ.

ಅರ್ಥಾತ್ ಆಯಾ ಬೆಳೆಯ ಸಾಂದ್ರತೆಯ ಜಿಲ್ಲೆಗಳಲ್ಲಿ ಏನು ಬದಲಾವಣೆಯಾಗಬಹುದು ಎಂಬುದನ್ನು ವರದಿ ಗಮನಿಸಬೇಕು. ಪ್ರಭಾವ ಮುಖ್ಯವಾಗುವುದು ಇಂತಹ ಜಿಲ್ಲೆಗಳಲ್ಲಿ.

ಮಳೆಯ ಸರಾಸರಿ ಲೆಕ್ಕ ಹಾಕುವಾಗ ರೆವಿನ್ಯೂ ಜಿಲ್ಲೆಯನ್ನು ಪರಿಗಣಿಸುವುದು ಭ್ರಾಮಕ ಅಂಕಿ-ಅಂಶಕ್ಕೆಡೆ ಮಾಡಿಕೊಡುತ್ತದೆ. ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿಯಂತಹ ಜಿಲ್ಲೆಗಳಲ್ಲಿ ಒಂದು ಭಾಗ ಅಪಾರ ಮಳೆಯ ಮಲೆನಾಡಾದರೆ ಇನ್ನೊಂದು ಭಾಗ ಕಡಿಮೆ ಮಳೆಯ ಬಯಲು ಸೀಮೆ. ಸರಾಸರಿ ಮಳೆಯ ಲೆಕ್ಕ ಅವಾಸ್ತವದ ಅಂಕಿ-ಅಂಶ ನೀಡಿ ದಾರಿ ತಪ್ಪಿಸಬಹುದು. ಕೃಷಿ ಪರಿಸರ ವಲಯ ವೆಂದು ಏನು ಪರಿಗಣಿಸಲಾಗುತ್ತಿದೆ, ಅದನ್ನೇ ಮಳೆ ಮಾಪನಕ್ಕೂ ಬಳಸದಿದ್ದರೆ ಹವಾಮಾನ ಬದಲಾವಣೆಯ ಸ್ಪಂದನೆಯ ಹಾದಿಗಳೇ ದಿಕ್ಕು ತಪ್ಪಬಹುದು.

ಈ ವರದಿಯು ಹವಾಮಾನ ಬದಲಾವಣೆಯ ಭವಿಷ್ಯದ ಸಂಭಾವ್ಯ ಪರಿಣಾಮಗಳನ್ನು ಮುಂದಿಡುತ್ತಾ ಇದನ್ನೆದುರಿಸಲು ಸಜ್ಜಾಗುವ ಬಗೆ ಹೇಗೆ ಎಂಬುದಕ್ಕೆ ಈಗಾಗಲೇ ಸರಕಾರ ಕೃಷಿ, ತೋಟಗಾರಿಕೆಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಹವಾಮಾನ ಬದಲಾವಣೆಯ ಸ್ಪಂದನಾ ಯೋಜನೆ ಎಂಬಂತೆ ಜೋಡಿಸಿ ಬಿಡುತ್ತದೆ.

ಸರಕಾರದ ಯೋಜನೆ/ ಕಾರ್ಯಕ್ರಮಗಳನ್ನು ಹವಾಮಾನ ಬದಲಾವಣೆಯಂತಹ ಆತ್ಯಂತಿಕ ಪ್ರಭಾವದ ಹಿನ್ನೆಲೆಯಲ್ಲಿ ವಿಮರ್ಶೆಗೊಳಪಡಿಸದಿದ್ದರೆ ಏನರ್ಥ?

ನಮ್ಮ ಬಹುತೇಕ ಕೃಷಿ ಸಂಬಂಧಿತ ಕಾರ್ಯಕ್ರಮಗಳ ಪರಿಣಾಮದ ಬಗ್ಗೆ ವ್ಯವಸ್ಥಿತ ಅಧ್ಯಯನವೇ ನಡೆದಿಲ್ಲ.

ಕೃಷಿಹೊಂಡದಂತಹ ಯೋಜನೆ ಉತ್ತಮ ಪರಿಣಾಮ ಬೀರಿದೆ. ಆದರೆ ಅದಕ್ಷ ಕೊಳವೆ ಬಾವಿ ಪಂಪುಗಳನ್ನು ಬದಲಾಯಿಸುವ ಬಗ್ಗೆ ಯಾವುದೇ ಪ್ರಗತಿ ಕಂಡಿಲ್ಲ. ಇನ್ನೊಂದಷ್ಟು ವರ್ಷಗಳಲ್ಲಿ ರಾಜ್ಯದ ಕೊಳವೆ ಬಾವಿಗಳ ಸಂಖ್ಯೆ 50 ಲಕ್ಷ ಮೀರಬಹುದು ಎಂದು ಈ ವರದಿ ಹೇಳುತ್ತದೆ. ಸರಕಾರ ಈ ಬಗ್ಗೆ ಜಾಣ ಕುರುಡು ನಟಿಸುತ್ತಿದೆ. ರೈತರು ಈ ಅಮೂಲ್ಯ ನಿಧಿಯನ್ನು ವಿವೇಚನಾಯುತವಾಗಿ ಬಳಸುವ ಬಗ್ಗೆ ಸರಕಾರ ರೈತರಿಗೆ ಖಡಕ್ಕಾಗಿ ಹೇಳಲು ಹಿಂಜರಿಯುತ್ತಲೇ ಬಂದಿದೆ.

ಉಳಿದ ಕಾರ್ಯಕ್ರಮಗಳೂ ಅಷ್ಟೇ, ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ ಪ್ರತಿಕ್ರಿಯಿಸಿದವುಗಳೇ.

ಕೃಷಿ ಪ್ರಪಂಚ ಸದಾ ಪ್ರಕೃತಿಯ ಹಂಗಿನಲ್ಲೇ ಬದುಕು ಕಟ್ಟಿಕೊಳ್ಳಬೇಕಾಗಿದೆ. ಆದರೆ ಉಳಿದ ಸುರಕ್ಷಾ ಕ್ರಮಗಳನ್ನು ಸರಕಾರ ಮಾಡಬಹುದು. ಅದನ್ನು ಮಾಡುವ ಬಗ್ಗೆ ಕಾಳಜಿ, ಬದ್ಧತೆಗಿಂತ ಫೂಲ್ ಪ್ರೂಫ್ ಎನ್ನಬಹುದಾದ ಯೋಜನೆಗಳನ್ನು ರೂಪಿಸುವ ಬುದ್ಧಿ, ದೃಷ್ಟಿ ಸ್ವಚ್ಛತೆ ಎರಡೂ ಸರಕಾರದ ಬಳಿ ಇದ್ದಂತಿಲ್ಲ.

ಈಗ ಈ ಹವಾಮಾನ ಬದಲಾವಣೆಯ ಭೂತ ಹೆಗಲಿಗೇರಿದರೆ ಮುಂದೇನು? ಈ ವರದಿಯ ವಿರೋಧಾಭಾಸ ಎಂದರೆ ಭವಿಷ್ಯದಲ್ಲಿ ಸಬ್ ಚೆಂಗಾಸಿ ಎಂದು ಸರಕಾರ ಹೇಳುವ ಸಾಧ್ಯತೆ ಇದೆ.

ಅಸಲಿಗೆ ಕಳೆದೊಂದು ದಶಕದಲ್ಲಿ ನಮ್ಮ ಕೃಷಿ ಲೋಕವನ್ನು ಹವಾಮಾನ ಬದಲಾವಣೆಯ ಕೋನದಿಂದ ನೋಡುವ ಯಾವ ಯೋಜನಾ ತಿದ್ದುಪಡಿಗಳನ್ನೂ ರಾಜ್ಯ, ಕೇಂದ್ರ ಸರಕಾರ ಮಾಡಿಲ್ಲ. ಇರುವುದೆಲ್ಲವನ್ನೂ ಈ ಹವಾಮಾನ ಬದಲಾವಣೆಯ ಅಜೆಂಡಾಕ್ಕೆ ಜೋಡಿಸುವ ಜಾಣತನ ತೋರಿದೆ; ಅಷ್ಟೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಪಿ. ಸುರೇಶ

contributor

Similar News

ಓ ಮೆಣಸೇ...!
ಓ ಮೆಣಸೇ...!