ಪಕ್ಷಾಂತರ ಮತ್ತು ಅಧಿಕಾರ ರಾಜಕಾರಣ

Update: 2024-03-28 04:35 GMT
Editor : Ismail | Byline : ನಾ. ದಿವಾಕರ

ತನಿಖಾ ಸಂಸ್ಥೆಗಳ ಅವಕೃಪೆಗೊಳಗಾಗದಂತೆ ತಾವು ಕಟ್ಟಿಕೊಂಡಿರುವ ಸಾಮ್ರಾಜ್ಯವನ್ನು ಸುರಕ್ಷಿತವಾಗಿರಿಸಲು ರಾಜಕೀಯ ನಾಯಕರು ಯಾವುದೇ ಹಿಂಜರಿಕೆ ಇಲ್ಲದೆ ಪಕ್ಷಾಂತರದಲ್ಲಿ ತೊಡಗುತ್ತಾರೆ. ಈ ರಾಜಕೀಯ ಹೊಂದಾಣಿಕೆಯ ನಡುವೆ ಕೆಲವು ದಶಕಗಳ ಹಿಂದೆ ಬಳಕೆಯಾಗುತ್ತಿದ್ದ ಹೈಕಮಾಂಡ್ ಸಂಸ್ಕೃತಿ, ಕುಟುಂಬ ರಾಜಕಾರಣ, ವ್ಯಕ್ತಿ ಆರಾಧನೆ, ವಂದಿಮಾಗಧ ಪ್ರವೃತ್ತಿ, ಆಯಾರಾಂ-ಗಯಾರಾಂ- ಈ ಪದಗಳೆಲ್ಲವೂ ಇತಿಹಾಸದ ಕಸದ ಬುಟ್ಟಿ ಸೇರಿದಂತಾಗಿದೆ. ಕ್ಲೀಷೆಯಂತೆ ಕಾಣುವ ಈ ಪದಗಳಿಂದಾಚೆಗಿನ ರಾಜಕೀಯ ವಾತಾವರಣವನ್ನು ಗಮನಿಸಿದಾಗ, ರಾಜಕಾರಣ ಎನ್ನುವುದೇ ಹಣಕಾಸು, ಭ್ರಷ್ಟಾಚಾರವನ್ನು ರಕ್ಷಿಸುವ ಭದ್ರಕೋಟೆಯಾಗಿ ಕಾಣುತ್ತದೆ.

ಭಾರತದ ಪ್ರಜಾಪ್ರಭುತ್ವ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿ ರುವುದೇ ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮೂಲಕ. ವಿಭಿನ್ನ ತಾತ್ವಿಕ-ಸೈದ್ಧಾಂತಿಕ ನೆಲೆಗಳ ರಾಜಕೀಯ ಪಕ್ಷಗಳು ಚುನಾವಣೆಗಳ ಮೂಲಕವೇ ತಳಮಟ್ಟದ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು, ಮತಗಳಿಕೆಯ ಪ್ರಮಾಣವನ್ನು ಮಾನದಂಡವಾಗಿ ಬಳಸಿಕೊಳ್ಳುತ್ತವೆ. ಮುಖ್ಯವಾಹಿನಿ ಪಕ್ಷಗಳಷ್ಟೇ ಅಲ್ಲದೆ ಪ್ರಾದೇಶಿಕ ಪಕ್ಷಗಳೂ, ಜನಾಂದೋಲನಗಳನ್ನೇ ಅವಲಂಬಿಸುವ ಪಕ್ಷಗಳೂ ಸಹ ಮತದಾರರ ಅಭಿಮತವನ್ನು ಆಧರಿಸಿಯೇ ತಮ್ಮ ಕಾರ್ಯಸೂಚಿಗಳನ್ನು ರೂಪಿಸಿಕೊಳ್ಳುತ್ತವೆ. ಕಳೆದ ಮೂರು ದಶಕಗಳ ನವ ಉದಾರವಾದಿ ಆರ್ಥಿಕತೆಯ ನೆಲೆಯಲ್ಲಿ ಭಾರತದ ರಾಜಕಾರಣ ಬಲಪಂಥೀಯತೆಯ ಕಡೆಗೆ ಹೊರಳುತ್ತಿದ್ದು, ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಮಾರುಕಟ್ಟೆ-ಬಂಡವಾಳದ ಹಿಡಿತವೂ ಬಿಗಿಯಾಗುತ್ತಾ ಬಂದಿದೆ.

ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂಡವಾಳಿಗ ಪಕ್ಷಗಳೂ (ಬೂರ್ಷ್ವಾ) ಕಾರ್ಪೊರೇಟ್ ಮಾರುಕಟ್ಟೆ ಜಗತ್ತನ್ನು ಆಶ್ರಯಿಸಿಯೇ ತಮ್ಮ ವ್ಯಾಪ್ತಿಯನ್ನು ಬಲಗೊಳಿಸುವುದು ಅನಿವಾರ್ಯವಾಗಿರುವುದರಿಂದ, ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಪೂರಕವಾದ ಕಾರ್ಯನೀತಿಗಳೊಂದಿಗೇ ರಾಜಕೀಯ ಪಕ್ಷಗಳು ತಮ್ಮ ತಾತ್ವಿಕ ನೆಲೆಗಳನ್ನು ಸಡಿಲಗೊಳಿಸುತ್ತಾ ಬಂದಿವೆ. ನವ ಉದಾರವಾದದ ಅರ್ಥವ್ಯವಸ್ಥೆಯಲ್ಲಿ ಅಭಿವೃದ್ಧಿಯ ಮಾರ್ಗವನ್ನು ನಿರ್ದೇಶಿಸುವ ಮಾನದಂಡಗಳಿಗೆ ಮೂಲ ಸೌಕರ್ಯಗಳೇ ಆಧಾರವಾಗಿರುವುದರಿಂದ, ರಸ್ತೆ-ರೈಲು-ವಿಮಾನ-ಸಂಚಾರ- ಸಾರಿಗೆ ಈ ವಲಯಗಳಲ್ಲಿ ಹೂಡುವ ಬಂಡವಾಳವೇ ಚುನಾವಣಾ ರಾಜಕಾರಣವನ್ನೂ ನಿಯಂತ್ರಿಸುತ್ತದೆ.

ಚುನಾವಣಾ ರಾಜಕಾರಣದ ನೆಲೆಯಲ್ಲಿ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ಮೈತ್ರಿ ಕಸರತ್ತುಗಳನ್ನು, ವ್ಯಕ್ತಿಗತ ನೆಲೆಯಲ್ಲಿ ರಾಜಕೀಯ ನಾಯಕರ ಬೇಲಿ ಜಿಗಿತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವ್ಯಕ್ತಿಗತ ಭ್ರಷ್ಟಾಚಾರ ಮತ್ತು ಪಕ್ಷಾಂತರ ಪ್ರಕ್ರಿಯೆಗಳಿಗೆ ನಿಕಟ ಸಂಬಂಧವಿರುವುದನ್ನು ಗುರುತಿಸಬಹುದು. ಆಳ್ವಿಕೆಯನ್ನು ವಹಿಸಿಕೊಳ್ಳಬಹುದಾದ ಪಕ್ಷಗಳನ್ನು ಆಶ್ರಯಿಸುವ ಮೂಲಕ ಭ್ರಷ್ಟ ರಾಜಕಾರಣಿಗಳು ತಮ್ಮ ಸ್ವ-ರಕ್ಷಣೆಗಾಗಿ ಪೂರ್ವಭಾವಿ ಕವಚಗಳನ್ನು ಕಟ್ಟಿಕೊಳ್ಳುವ ಒಂದು ಹೊಸ ಪ್ರವೃತ್ತಿಗೆ ಭಾರತದ ರಾಜಕಾರಣ ಸಾಕ್ಷಿಯಾಗುತ್ತಿದೆ. ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮೊದಲಾದ ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ಆಳುವ ಪಕ್ಷಗಳು ತಮ್ಮ ವಿರೋಧಿಗಳನ್ನು ಮಣಿಸಲು ಅಸ್ತ್ರಗಳಂತೆ ಬಳಸುವ ಪ್ರಕ್ರಿಯೆಗೆ ಈಗ ಅಧಿಕೃತತೆ ಲಭಿಸಿದೆ. ಸಾರ್ವಜನಿಕ ವಲಯದಲ್ಲಿ-ಮಾಧ್ಯಮಗಳಲ್ಲಿ ಇದು ಚರ್ಚೆಗೀಡಾಗುವುದೇ ಇಲ್ಲ.

ಹಾಗಾಗಿ ತನಿಖಾ ಸಂಸ್ಥೆಗಳ ಅವಕೃಪೆಗೊಳಗಾಗದಂತೆ ತಾವು ಕಟ್ಟಿಕೊಂಡಿರುವ ಸಾಮ್ರಾಜ್ಯವನ್ನು ಸುರಕ್ಷಿತವಾಗಿರಿಸಲು ರಾಜಕೀಯ ನಾಯಕರು ಯಾವುದೇ ಹಿಂಜರಿಕೆ ಇಲ್ಲದೆ ಪಕ್ಷಾಂತರದಲ್ಲಿ ತೊಡಗುತ್ತಾರೆ. ಈ ರಾಜಕೀಯ ಹೊಂದಾಣಿಕೆಯ ನಡುವೆ ಕೆಲವು ದಶಕಗಳ ಹಿಂದೆ ಬಳಕೆಯಾಗುತ್ತಿದ್ದ ಹೈಕಮಾಂಡ್‌ಸಂಸ್ಕೃತಿ, ಕುಟುಂಬ ರಾಜಕಾರಣ, ವ್ಯಕ್ತಿ ಆರಾಧನೆ, ವಂದಿಮಾಗಧ ಪ್ರವೃತ್ತಿ, ಆಯಾರಾಂ-ಗಯಾರಾಂ- ಈ ಪದಗಳೆಲ್ಲವೂ ಇತಿಹಾಸದ ಕಸದ ಬುಟ್ಟಿ ಸೇರಿದಂತಾಗಿದೆ. ಕ್ಲೀಷೆಯಂತೆ ಕಾಣುವ ಈ ಪದಗಳಿಂದಾಚೆಗಿನ ರಾಜಕೀಯ ವಾತಾವರಣವನ್ನು ಗಮನಿಸಿದಾಗ, ರಾಜಕಾರಣ ಎನ್ನುವುದೇ ಹಣಕಾಸು ಭ್ರಷ್ಟಾಚಾರವನ್ನು ರಕ್ಷಿಸುವ ಭದ್ರಕೋಟೆಯಾಗಿ ಕಾಣುತ್ತದೆ.

ಕಳೆದ ಹಲವು ದಿನಗಳಿಂದ ಸುದ್ದಿ ಮಾಡುತ್ತಿರುವ ಚುನಾವಣಾ ಬಾಂಡ್ ಅವಾಂತರಗಳನ್ನೇ ಸೂಕ್ಷ್ಮವಾಗಿ ಗಮನಿಸಿದಾಗ, ಆಳ್ವಿಕೆಯ ಕೇಂದ್ರಗಳಿಗೂ ಜನಸಾಮಾನ್ಯರ ಅನುಕೂಲಕ್ಕಾಗಿ ನಿರ್ಮಿಸಲಾಗುವ ಮೂಲ ಸೌಕರ್ಯಗಳಿಗೂ, ಈ ನಿರ್ಮಾಣದ ಗುತ್ತಿಗೆ ಪಡೆಯುವ ಕಾರ್ಪೊರೇಟ್ ಉದ್ದಿಮೆಗಳಿಗೂ ಇರುವ ನೇರ ಸಂಬಂಧಗಳು ನಿಚ್ಚಳವಾಗುತ್ತದೆ. ಸರಕಾರಗಳು ಮೂಲ ಸೌಕರ್ಯ ಕಾಮಗಾರಿಗಳಿಗೆ ನೀಡುವ ಪ್ರತಿಯೊಂದು ಗುತ್ತಿಗೆಗೂ ರಾಜಕೀಯ ಪಕ್ಷಗಳು, ಹೆಚ್ಚಿನ ಪ್ರಮಾಣದಲ್ಲಿ ಆಡಳಿತಾರೂಢ ಪಕ್ಷಗಳು, ಉದ್ಯಮಿಗಳಿಂದ ಹಣಕಾಸು ನೆರವು ಪಡೆಯುತ್ತವೆ. ಈ ಪದ್ಧತಿಗೆ ಕಾನೂನಾತ್ಮಕ ನೆಲೆ ಕಲ್ಪಿಸುವ ಒಂದು ಪ್ರಯತ್ನವಾಗಿದ್ದ ಚುನಾವಣಾ ಬಾಂಡ್ ಯೋಜನೆ ಇಂದು ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾಗಿ ಬೆತ್ತಲಾಗಿದೆ.

ನವ ಉದಾರವಾದದ ನೆರಳಲ್ಲಿ

ನವ ಉದಾರವಾದಿ-ಬಂಡವಾಳಶಾಹಿ ಆರ್ಥಿಕತೆಯಲ್ಲಿ ಆಳ್ವಿಕೆಯ ಕೇಂದ್ರಗಳು ಭ್ರಷ್ಟ ಮಾರ್ಗಗಳ ಮೂಲಕವೇ ಕಾರ್ಯನಿರ್ವಹಿಸುತ್ತವೆ ಎಂಬ ವಾಸ್ತವವನ್ನು ಅರಿತಿದ್ದರೆ, ಚುನಾವಣಾ ಬಾಂಡ್ ಹಗರಣ ಅಚ್ಚರಿ ಮೂಡಿಸಬೇಕಿಲ್ಲ. ಆದರೆ ಅಚ್ಚರಿ ಮೂಡಿಸುವ ಸಂಗತಿ ಎಂದರೆ ರಾಜಕೀಯ ಪಕ್ಷಗಳ, ನೇತಾರರ ದಾರ್ಷ್ಟ್ಯ ಮತ್ತು ಹಿಂಜರಿಕೆಯಿಲ್ಲದ ನಿಲುವು. ಹಣ ಇಲ್ಲದೆ ರಾಜಕಾರಣ ಮಾಡಲಾಗುವುದಿಲ್ಲ ಚುನಾವಣಾ ಬಾಂಡ್‌ಯೋಜನೆಯ ಹಿಂದೆ ಸದುದ್ದೇಶವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂದರ್ಶನದಲ್ಲಿ ಹೇಳಿರುವುದನ್ನು ಗಮನಿಸಿದಾಗ, ಉದ್ಯಮ-ರಾಜಕಾರಣ ಮತ್ತು ಆಳ್ವಿಕೆಯ ನಡುವಿನ ಸಂಬಂಧಗಳು ಹೇಗೆ ಸಾರ್ವಜನಿಕ ಸಮ್ಮತಿಯನ್ನು ಪಡೆದಿವೆ ಎನ್ನುವುದು ಅರ್ಥವಾಗುತ್ತದೆ. ಈ ಯೋಜನೆಯ ಮೂಲಕ ಕಪ್ಪುಹಣದ ಚಲಾವಣೆಯನ್ನು ನಿಯಂತ್ರಿಸಬಹುದು ಎನ್ನುವ ಅಪ್ರಬುದ್ಧ ಪ್ರತಿಪಾದನೆಗಳು ಹೇರಳವಾಗಿ ಕೇಳಿಬರುತ್ತಿವೆ.

ಯಾವುದೇ ಅರ್ಥವ್ಯವಸ್ಥೆಯಲ್ಲಿ ಕಪ್ಪುಹಣ ನಗದು ರೂಪದಲ್ಲಿ ಚಲಾವಣೆಯಲ್ಲಿರುವುದಿಲ್ಲ. ಉದ್ಯಮಿಗಳು ತಾವು ಗಳಿಸುವ ಹೆಚ್ಚಿನ ಲಾಭದ ಒಂದಂಶವನ್ನು ತಮ್ಮ ಖಾತೆಗಳಲ್ಲಿ ಹೂಡಿಟ್ಟರೆ, ಹೆಚ್ಚಿನ ಅಂಶವನ್ನು ಸ್ಥಿರಾಸ್ತಿಗಳಲ್ಲಿ ಹೂಡುತ್ತಾರೆ. ಈ ಸ್ಥಿರಾಸ್ತಿಗಳನ್ನು ತಮ್ಮ ಔದ್ಯಮಿಕ ಸಾಮ್ರಾಜ್ಯದ ವಿಸ್ತರಣೆಗಾಗಿ ಬಳಸಿಕೊಳ್ಳುವ ಹಂತದಲ್ಲಿ ಅಧಿಕಾರಸ್ಥ ರಾಜಕಾರಣಿಗಳೊಡನೆ, ಸರಕಾರಗಳ ವಕ್ತಾರರೊಡನೆ ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನೂ ಸುರಕ್ಷತೆ ಬೇಕಾದಲ್ಲಿ ವಿದೇಶಿ ಬ್ಯಾಂಕುಗಳಲ್ಲಿ ಹೂಡಿರುತ್ತಾರೆ. ಚುನಾವಣಾ ಬಾಂಡ್‌ಗಳ ಮೂಲಕ ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳು ವಸ್ತುಶಃ ಕಪ್ಪು ಹಣ ಆಗಲಾರದು. ಅದು ಆಯಾ ಉದ್ಯಮಿಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಹೂಡುವ ಅಧಿಕ ಬಂಡವಾಳದ ರೂಪದಲ್ಲಿ ರಾಜಕೀಯ ಪಕ್ಷಗಳಿಗೆ ಹರಿಯುತ್ತದೆ. ವಿದ್ಯುನ್ಮಾನ ಮಾಧ್ಯಮಗಳು ರಾಜಕೀಯ ಪಕ್ಷಗಳ ಪರವಾಗಿ ವಕ್ತಾರಿಕೆ ವಹಿಸುವ ಒಂದು ನೂತನ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಬಂಡವಾಳದ ಹರಿವು ಎಂತೆಂತಹ ಸ್ವರೂಪಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ನವ ಉದಾರವಾದಿ ಆರ್ಥಿಕತೆಯಲ್ಲಿ ಮಾಧ್ಯಮಗಳ ಮೇಲೆ ಕಾರ್ಪೊರೇಟ್ ಔದ್ಯಮಿಕ ವಲಯವು ಸಾಧಿಸಿರುವ ನಿಯಂತ್ರಣಾಧಿಕಾರವನ್ನು ಈ ನೆಲೆಯಲ್ಲೇ ನೋಡಬೇಕಿದೆ. ವಸ್ತುಶಃ ನಿರ್ದಿಷ್ಟ ಪಕ್ಷಗಳ ವಕ್ತಾರರಂತೆ, ಜಾಹೀರಾತುದಾರರಂತೆ, ಹಿತರಕ್ಷಕರಂತೆ ವರ್ತಿಸುವ ಸುದ್ದಿಮನೆಗಳು, ವಿದ್ಯುನ್ಮಾನ ವಾಹಿನಿಗಳು ಕಾರ್ಪೊರೇಟ್ ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಅಧಿಕ ಬಂಡವಾಳಕ್ಕೆ ಪ್ರಶಸ್ತ ನೆಲೆಯಾಗಿ ಪರಿಣಮಿಸುತ್ತವೆ. ಅಧಿಕಾರ ಕೇಂದ್ರಗಳೊಂದಿಗೆ ನಿಕಟ-ಸೌಹಾರ್ದಯುತ ಸಂಬಂಧವನ್ನು ಸೃಷ್ಟಿಸಿಕೊಳ್ಳುವ ಈ ಮಾಧ್ಯಮಗಳೇ, ಅಧಿಕಾರರೂಢ ಪಕ್ಷಗಳ ಕಾರ್ಯಸೂಚಿಗಳನ್ನು ಸಮಾಜದ ತಳಮಟ್ಟದವರೆಗೂ ಕೊಂಡೊಯ್ಯುವ ಮೂಲಕ ತಮ್ಮ ಮಾರುಕಟ್ಟೆ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತವೆ. ಇದರಿಂದ ಉದ್ಭವಿಸುವ ಲಾಭದ ಒಂದಂಶ ಮತ್ತೆ ರಾಜಕೀಯ ದೇಣಿಗೆಯಾಗಿ ಹರಿಯುತ್ತದೆ.

ಈ ಸೈಕಲ್ ಬಂಡವಾಳಶಾಹಿ ಆರ್ಥಿಕತೆಯ ಒಂದು ವಿಶಿಷ್ಟ ಲಕ್ಷಣ. ಚುನಾವಣಾ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಬೇಕಾದರೆ ರಾಜಕೀಯ ಪಕ್ಷಗಳಿಗೆ ಈ ಮಾಧ್ಯಮ ವಾಹಿನಿಗಳನ್ನು ಒಲಿಸಿಕೊಳ್ಳುವುದು, ಉಳಿಸಿಕೊಳ್ಳುವುದು, ಪೋಷಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ 2004-14ರ ಅವಧಿಯ 2ಜಿ ಹಗರಣ, ಕಾಮನ್‌ವೆಲ್ತ್ ಹಗರಣ ಮುಂತಾದ ಭ್ರಷ್ಟಾಚಾರದ ಬ್ರಹ್ಮಾಂಡಗಳು ಇಡೀ ಮಾಧ್ಯಮ ವಲಯವನ್ನು ಸಮ್ಮೋಹನಗೊಳಿಸಿದಂತೆ, ಅದಕ್ಕಿಂತಲೂ ಹೆಚ್ಚು ಗಂಭೀರವಾದ ಚುನಾವಣಾ ಬಾಂಡ್ ಹಗರಣ ಪ್ರವಹಿಸುತ್ತಿಲ್ಲ. ಸಕ್ರಿಯ ರಾಜಕಾರಣಕ್ಕೆ ಹಣಕಾಸು ಪೂರೈಕೆ ಒಂದು ಇಂಧನದಂತೆ ಕಾರ್ಯನಿರ್ವಹಿಸುವುದನ್ನು ಅರಿತಿರುವ ಕಾರ್ಪೊರೇಟ್ ಔದ್ಯಮಿಕ ಜಗತ್ತು, ಈ ಇಂಧನ ಸರಬರಾಜಿಗೆ ಅಗತ್ಯವಾದ ಎಲ್ಲ ಗುಪ್ತ ವಾಹಿನಿಗಳನ್ನೂ ಚಲನಶೀಲ ವಾಗಿಟ್ಟಿರುತ್ತವೆ. ಚುನಾವಣಾ ಬಾಂಡ್ ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಯಾಗದಿರುವುದು ಈ ಕಾರಣದಿಂದಲೇ.

ನಿಷ್ಠೆ ಬದ್ಧತೆಗಳೆಂಬ ಕ್ಲೀಷೆಗಳು

ಈ ಭ್ರಷ್ಟ ರಾಜಕಾರಣದ ನಡುವೆಯೇ ಪಕ್ಷ ನಿಷ್ಠೆ ಎಂಬ ಪದವೂ ಕ್ಲೀಷೆಯಾಗಿಹೋಗಿದೆ. ಎರಡು ದಶಕಗಳ ಹಿಂದೆ ಮುಖ್ಯವಾಹಿನಿ ಪಕ್ಷಗಳಲ್ಲಿ ಕಾಣಬಹುದಾಗಿದ್ದ ತಾತ್ವಿಕ ಬದ್ಧತೆ ಮತ್ತು ಪಕ್ಷ ಸಿದ್ಧಾಂತದ ನೆಲೆಗಳು ಇಂದು ಸಮಯ ಸಾಧಕತನದ ಸೇತುವೆಗಳಾಗಿ ಪರಿಣಮಿಸಿವೆ. ನಿನ್ನೆ ಆಡಿದ ಮಾತು-ಇಂದು ಆಡುವ ನುಡಿ-ನಾಳೆ ಆಡಬಹುದಾದ ಮಾತುಗಳಿಗೆ ಯಾವುದೇ ಸಂಬಂಧವೇ ಇಲ್ಲವೆಂಬಂತೆ ರಾಜಕೀಯ ನಾಯಕರು ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಿದ್ದಾರೆ. ಹಾಗಾಗಿಯೇ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ರಾಜಕಾರಣಿಗಳೂ ಸಹ ಸಂಭಾವಿತರಾಗಿ, ಜನರ ಮುಂದೆ ಮತಯಾಚನೆಗೆ ಸಜ್ಜಾಗುತ್ತಾರೆ. ಇಂತಹ ನಾಯಕರಿಗೆ ಸ್ವಾಗತ ಕೋರಲು ಬಂಡವಾಳಿಗ ಪಕ್ಷಗಳು ತೆರೆದ ಮನಸ್ಸಿನೊಂದಿಗೆ ಸಿದ್ಧವಾಗಿರುತ್ತವೆ. ಕರ್ನಾಟಕದ ಗಣಿ ರಾಜಕಾರಣದ ಚರಿತ್ರೆ ಇಂತಹ ಒಂದು ಪ್ರವೃತ್ತಿಯನ್ನು ಸಾಕ್ಷೀಕರಿಸುವ ಸಮಕಾಲೀನ ದಾಖಲೆಯಾಗಿ ಉಳಿಯಲಿದೆ.

ಈ ಭ್ರಷ್ಟ ಪರಂಪರೆಯ ನಡುವೆ ಪ್ರಾಮಾಣಿಕತೆ ಮತ್ತು ನೈತಿಕತೆ ಎಂಬ ಎರಡು ಪದಗಳು ಅರ್ಥಕಳೆದುಕೊಳ್ಳುತ್ತಿರುವುದು ವರ್ತಮಾನ ಭಾರತದ ಅತಿದೊಡ್ಡ ದುರಂತ. ಸಕ್ರಿಯ ರಾಜಕಾರಣದಲ್ಲಿ ಸಾರ್ವತ್ರಿಕವಾಗಿ ಸ್ವೀಕೃತವಾದ ಎರಡು ಸಂಹಿತೆಗಳೆಂದರೆ ‘‘ರಾಜಕೀಯದಲ್ಲಿ ಶಾಶ್ವತ ಶತ್ರು ಅಥವಾ ಮಿತ್ರ ಇರುವುದಿಲ್ಲ’’ ಮತ್ತು ‘‘ಶತ್ರುವಿನ ಶತ್ರು ನನ್ನ ಮಿತ್ರ’’ ಎಂಬ ಪಾರಂಪರಿಕ ಗ್ರಹಿಕೆ. ಈ ಎರಡೂ ಸಂಹಿತೆಗಳನ್ನು ಸಮರ್ಪಕವಾಗಿ, ತನ್ನ ಲಾಭ-ಮುನ್ನಡೆ-ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಚಾಣಾಕ್ಷತೆ ಕಾರ್ಪೊರೇಟ್ ಮಾರುಕಟ್ಟೆಗೆ ಸಿದ್ಧಿಸಿರುತ್ತದೆ. ಆದರೆ ಈ ಸಂಹಿತೆಗಳಿಂದಾಗುವ ಅಪಾಯಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ದೊಡ್ಡ ಜವಾಬ್ದಾರಿ ನಾಗರಿಕರ ಮೇಲಿರುತ್ತದೆ. ತಮ್ಮದೇ ಆದ ಸೈದ್ಧಾಂತಿಕ ನಂಬಿಕೆಗಳಿಗೆ ಅನುಗುಣವಾಗಿ ವಿವಿಧ ರಾಜಕೀಯ ಪಕ್ಷಗಳನ್ನು ಅನುಸರಿಸುವ ನಾಗರಿಕರಲ್ಲಿ ನೈಜ ರಾಜಕೀಯ ಪ್ರಜ್ಞೆ ಮೂಡದ ಹೊರತು, ಈ ಜವಾಬ್ದಾರಿಯೂ ಅರ್ಥವಾಗುವುದಿಲ್ಲ.

ಭಾರತದ ಅಧಿಕಾರ ರಾಜಕಾರಣದಲ್ಲಿ ಈ ಜವಾಬ್ದಾರಿ ನಿರ್ವಹಣೆಗೆ ಅಡ್ಡಿಯಾಗುತ್ತಿರುವುದು ಜಾತಿ ರಾಜಕಾರಣ, ಅಸ್ಮಿತೆಯ ಚೌಕಟ್ಟುಗಳು, ಊಳಿಗಮಾನ್ಯ ವ್ಯಕ್ತಿ ಕೇಂದ್ರಿತ ರಾಜಕಾರಣ ಮತ್ತು ಇತ್ತೀಚಿನ ವಿದ್ಯಮಾನವಾಗಿರುವ ಮತೀಯ ರಾಜಕಾರಣ. ಲೋಹಿಯಾವಾದ-ಸಮಾಜವಾದವನ್ನೇ ಇಂದಿಗೂ ಎದೆಗಪ್ಪಿಕೊಳ್ಳುವ ಪ್ರಾದೇಶಿಕ ಪಕ್ಷಗಳು, ತಳಸಮುದಾಯಗಳ ವಾರಸುದಾರಿಕೆಯನ್ನು ವಹಿಸಿಕೊಳ್ಳುವ ಪಕ್ಷಗಳು ತಾವೇ ಸೃಷ್ಟಿಸಿರುವ ಅಸ್ಮಿತೆಯ ಗೋಡೆಗಳನ್ನು ಹಾಗೂ ತಮ್ಮ ಸುತ್ತಲೂ ನಿರ್ಮಿಸಿಕೊಂಡಿರುವ ಬೇಲಿಗಳನ್ನು ಕೆಡವಿಹಾಕುವುದು ಈ ಕಾಲದ ಅನಿವಾರ್ಯತೆಯಾಗಿದೆ. ಏಕೆಂದರೆ ತಳಮಟ್ಟದ ಸಮಾಜದಲ್ಲಿ ಶೋಷಿತ ಜನತೆಗೆ ಈ ಬೇಲಿಗಳು ಹಾದಿ ಮುಳ್ಳುಗಳಾಗಿ ಪರಿಣಮಿಸಿವೆ. ನವ ಉದಾರವಾದ-ಬಲಪಂಥೀಯ ಹಿಂದುತ್ವ- ಕೋಮುವಾದ-ಮತೀಯವಾದ ಮತ್ತು ಕಾರ್ಪೊರೇಟ್‌ಮಾರುಕಟ್ಟೆಯ ಆಡಳಿತ ವ್ಯವಸ್ಥೆಯ ದಾಳಿಗೆ ಸಿಲುಕಿ ತಮ್ಮ ಮೂಲ ಸಾಂಸ್ಕೃತಿಕ ನೆಲೆಗಳನ್ನೂ ಕಳೆದುಕೊಳ್ಳುತ್ತಿರುವ ಕೋಟ್ಯಂತರ ಭಾರತೀಯರಿಗೆ ಈ ಅಸ್ಮಿತೆಯ ಬೇಲಿಗಳು ಅಡ್ಡಗೋಡೆಗಳಾಗಿ ಕಾಣುತ್ತವೆ.

ಪರ್ಯಾಯ ರಾಜಕಾರಣದ ಕನಸು ಕಾಣುತ್ತಿರುವ ಅಸಂಖ್ಯಾತ ಭಾರತೀಯರಿಗೆ ಹಿಮಾಲಯದೆತ್ತರ ಬೆಳೆದಿರುವ ಈ ಅಡ್ಡಗೋಡೆಗಳೇ ಶತ್ರುಗಳಾಗಿವೆ. ತಳಮಟ್ಟದ ರಾಜಕೀಯ ಕಾರ್ಯಕರ್ತರು ತಮ್ಮ ವ್ಯಕ್ತಿ ನಿಷ್ಠೆಯನ್ನು ಬದಿಗೊತ್ತಿ ತತ್ವನಿಷ್ಠೆಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಬಂಡವಾಳಿಗ ಪಕ್ಷಗಳಿಗೆ ಮಾರುಕಟ್ಟೆಯ ನಿಯಮಗಳೇ ಆದರ್ಶಪ್ರಾಯವಾಗಿ ಕಾಣುತ್ತವೆ ಏಕೆಂದರೆ ಅದು ಅಸ್ತಿತ್ವದ ಪ್ರಶ್ನೆ. ಈ ದುರಿತ ಕಾಲದಲ್ಲೂ ಏಕೀಕರಣದ ಬಗ್ಗೆ ಯೋಚಿಸದ ಎಡಪಕ್ಷಗಳಿಗೆ ತಾವು ನಂಬಿದ ತತ್ವ-ಸಿದ್ಧಾಂತಗಳಿಂದಾಚೆಗೂ ಇರುವ ಒಂದು ವಾಸ್ತವ ಜಗತ್ತನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜೆಎನ್‌ಯು ಚುನಾವಣೆಗಳ ಫಲಿತಾಂಶಗಳು ಈ ನಿಟ್ಟಿನಲ್ಲಿ ಸ್ಪಷ್ಟ ಸಂದೇಶವನ್ನು ನೀಡಿದೆ. ಆದರೆ ಈ ಸಂದೇಶವನ್ನು ನೆಲಮಟ್ಟದಲ್ಲಿ ಸಾಕಾರಗೊಳಿಸುವ ಕಾರ್ಯಸೂಚಿ ರೂಪಿಸುವ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಈ ಮಹತ್ತರ ಜವಾಬ್ದಾರಿಯ ನೊಗವನ್ನು ಹೊರಬೇಕಾದ ಯುವ ಸಮುದಾಯಕ್ಕೆ ಸ್ಪಷ್ಟ ಹಾದಿಯನ್ನು ತೋರಬೇಕಾದ ಹೊಣೆಗಾರಿಕೆ ರೈತರು, ಕಾರ್ಮಿಕರು ಹಾಗೂ ಶೋಷಿತ ಸಮುದಾಯಗಳ ಮೇಲಿದೆ.

ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ಪಕ್ಷಾಂತರ-ಭ್ರಷ್ಟಾಚಾರ ಮುಂತಾದ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ. 2024ರ ಚುನಾವಣೆಗಳು ಇಂತಹ ಒಂದು ಅವಕಾಶವನ್ನು ಕಲ್ಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನಾ. ದಿವಾಕರ

contributor

Similar News

ಓ ಮೆಣಸೇ...!
ಓ ಮೆಣಸೇ...!