Glasgow 2026 Commonwealth Games | ಜೂಡೋದಲ್ಲಿ ಐತಿಹಾಸಿಕ ಚಿನ್ನ ಗೆದ್ದ ಅಸ್ಮಿತಾ ಡೇ

ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ

Update: 2026-07-31 21:10 IST

ಅಸ್ಮಿತಾ ಡೇ | Photo Credit : AP 

ಗ್ಲಾಸ್ಗೋ: ಕಾಮನ್‌ ವೆಲ್ತ್ ಕ್ರೀಡಾಕೂಟದ ಜೂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆಯನ್ನು 23 ವರ್ಷದ ಅಸ್ಮಿತಾ ಡೇ ಶುಕ್ರವಾರ ಮಾಡಿದರು. ಮಹಿಳೆಯರ 48 ಕೆಜಿ ವಿಭಾಗದ ಫೈನಲ್ ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಗೋಲ್ಡನ್ ಸ್ಕೋರ್ ವಿಧಾನದಲ್ಲಿ ಮಣಿಸಿದ ಅವರು, ಕಾಮನ್‌ ವೆಲ್ತ್ ಕ್ರೀಡಾಕೂಟದ ಜೂಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.

ಚಿನ್ನದ ಪದಕದತ್ತ ಸಾಗಿದ ಅಸ್ಮಿತಾ, ಕ್ವಾರ್ಟರ್ ಫೈನಲ್ ನಲ್ಲಿ ಸ್ಕಾಟ್ಲೆಂಡ್ ನ ಇವಾ ಎವಿಂಗ್ ಅವರನ್ನು ಹಾಗೂ ಸೆಮಿಫೈನಲ್ ನಲ್ಲಿ ಸಮ್ಮರ್ ಶಾ ಅವರನ್ನು ಸೋಲಿಸಿ ಫೈನಲ್‌ ಗೆ ಪ್ರವೇಶಿಸಿದ್ದರು. ಪ್ರಶಸ್ತಿ ಸುತ್ತಿನಲ್ಲೂ ಹೈಡಿ ಕ್ವಾಚ್ ವಿರುದ್ಧ ಮೇಲುಗೈ ಸಾಧಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಕಾಮನ್‌ ವೆಲ್ತ್ ಕ್ರೀಡಾಕೂಟದ ಹಿಂದಿನ ಆವೃತ್ತಿಗಳಲ್ಲಿ ಭಾರತೀಯ ಜೂಡೋಪಟುಗಳು ಐದು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳನ್ನು ಗೆದ್ದಿದ್ದರೂ, ಚಿನ್ನದ ಪದಕ ಮಾತ್ರ ಬಂದಿರಲಿಲ್ಲ. ಅಸ್ಮಿತಾ ಅವರ ಸಾಧನೆಯೊಂದಿಗೆ ಆ ಕೊರತೆಯೂ ನೀಗಿದೆ.

ಕಾಮನ್‌ ವೆಲ್ತ್ ಕ್ರೀಡಾಕೂಟದ ಜೂಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟವರು ನರೇಂದರ್ ಸಿಂಗ್. ಅವರು 1990ರಲ್ಲಿ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದ ಕಾಮನ್‌ ವೆಲ್ತ್ ಕ್ರೀಡಾಕೂಟದ ಪುರುಷರ ಎಕ್ಸ್ಟ್ರಾ ಲೈಟ್ ವೇಟ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಏಕೈಕ ಭಾರತೀಯ ಜೂಡೋಪಟು ಎಂಬ ಹೆಗ್ಗಳಿಕೆ ಶುಶೀಲಾ ಲಿಕ್ಮಾಬಮ್ ಅವರದ್ದು. ಅವರು 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಬಳಿಕ 2022ರ ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲೂ ಇದೇ ವಿಭಾಗದಲ್ಲಿ ಮತ್ತೊಂದು ಬೆಳ್ಳಿ ಪದಕ ಜಯಿಸಿದ್ದರು.

ಅಸ್ಮಿತಾ ಅವರ ಚಿನ್ನವು 2026ರ ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕವಾಗಿದೆ.

ಶುಕ್ರವಾರ ಜೂಡೋದಲ್ಲಿ ಭಾರತಕ್ಕೆ ಇನ್ನೂ ಎರಡು ಚಿನ್ನದ ಪದಕಗಳ ಅವಕಾಶವಿದೆ. ಹರ್ಷ್ ಸಿಂಗ್ ಹಾಗೂ ಯಾಮಿನಿ ತಮ್ಮ ತಮ್ಮ ವಿಭಾಗಗಳ ಫೈನಲ್ ನಲ್ಲಿ ಚಿನ್ನಕ್ಕಾಗಿ ಸೆಣಸಲಿದ್ದಾರೆ.

►18ಕ್ಕೆ ಏರಿದ ಭಾರತದ ಪದಕಗಳ ಸಂಖ್ಯೆ

ಅಸ್ಮಿತಾ ಅವರ ಚಿನ್ನದ ಪದಕದೊಂದಿಗೆ 2026ರ ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 18ಕ್ಕೆ ಏರಿದೆ. ಭಾರತ ಇದುವರೆಗೆ ನಾಲ್ಕು ಚಿನ್ನ, 10 ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದಿದೆ.

ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಇಬ್ಬರು ಜೂಡೋಪಟುಗಳು ಹಾಗೂ 9 ಬಾಕ್ಸರ್ ಗಳು ಈಗಾಗಲೇ ಪದಕ ಖಚಿತಪಡಿಸಿಕೊಂಡಿದ್ದು, ಗ್ಲಾಸ್ಗೋದಿಂದ ಕನಿಷ್ಠ 11 ಪದಕಗಳೊಂದಿಗೆ ಮರಳುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News