ರಿಚಾ ಘೋಷ್ ಗೆ ಚಿನ್ನದ ಲೇಪಿತ ಬ್ಯಾಟ್, ಚೆಂಡು ನೀಡಿ ಗೌರವಿಸಲಿರುವ ಸಿಎಬಿ
Photo : PTI
ಹೊಸದಿಲ್ಲಿ, ನ.5: ಭಾರತದ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿರುವ ವಿಕೆಟ್ಕೀಪರ್-ಬ್ಯಾಟರ್ ರಿಚಾ ಘೋಷ್ ಗೆ ಶನಿವಾರ ಈಡನ್ಗಾರ್ಡನ್ಸ್ನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ವಿಶೇಷವಾಗಿ ರಚಿಸಲಾದ ಚಿನ್ನದ ಲೇಪಿತ ಬ್ಯಾಟ್ ಹಾಗೂ ಚೆಂಡನ್ನು ನೀಡಿ ಗೌರವಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ನಿರ್ಧರಿಸಿದೆ.
ಭಾರತದ ಚೊಚ್ಚಲ ಪ್ರಶಸ್ತಿ ಗೆಲುವಿನ ಹಿಂದಿನ ಪ್ರೇರಕ ಶಕ್ತಿಗಳಲ್ಲಿ ಒಬ್ಬರಾದ ರಿಚಾ 8 ಇನಿಂಗ್ಸ್ ನಳಲ್ಲಿ 133.52ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 235 ರನ್ ಗಳಿಸಿದ್ದರು. ಈ ಮೂಲದ ಭಾರತದ ಟಾಪ್-5 ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
ರಿಚಾ ಅವರ ಅತ್ಯುತ್ತಮ ಸಾಧನೆಗಳು ಹಾಗೂ ಭಾರತೀಯ ಕ್ರಿಕೆಟ್ಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ, ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹಾಗೂ ವೇಗದ ದಂತಕತೆ ಜೂಲನ್ ಗೋಸ್ವಾಮಿ ಸಹಿ ಮಾಡಿರುವ ಚಿನ್ನದ ಲೇಪಿತ ಬ್ಯಾಟ್ ಹಾಗೂ ಚೆಂಡನ್ನು ರಿಚಾಗೆ ನೀಡಲಾಗುವುದು.
‘‘ವಿಶ್ವ ವೇದಿಕೆಯಲ್ಲಿ ರಿಚಾ ಅವರು ಗಮನಾರ್ಹ ಪ್ರತಿಭೆ, ಸಂಯಮ ಹಾಗೂ ಹೋರಾಟದ ಮನೋಭಾವ ತೋರಿಸಿದ್ದಾರೆ. ಈ ಚಿನ್ನದ ಬ್ಯಾಟ್ ಹಾಗೂ ಚೆಂಡಿನೊಂದಿಗೆ ಅವರನ್ನು ಗೌರವಿಸುವ ಮೂಲಕ ಭಾರತೀಯ ಕ್ರಿಕೆಟಿಗೆ ಅವರ ಅಸಾಧಾರಣ ಕೊಡುಗೆಯ ಗುರುತಿಸುವ ಸಣ್ಣ ಪ್ರಯತ್ನ ಮಾಡಲಾಗುವುದು. ರಿಚಾ ಅವರು ಬಂಗಾಳ ಹಾಗೂ ದೇಶಾದ್ಯಂತ ಪ್ರತಿಯೊಬ್ಬ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ’’ಎಂದು ಗಂಗುಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿಲಿಗುರಿಯ 22 ವರ್ಷದ ರಿಚಾ ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 24 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ 12 ಸಿಕ್ಸರ್ಗಳನ್ನು ಸಿಡಿಸಿರುವ ರಿಚಾ ಅವರು ಒಂದೇ ಮಹಿಳಾ ವಿಶ್ವಕಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಡಿಯಾಂಡ್ರಾ ಡಾಟಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.