ಸೂರ್ಯವಂಶಿ ಬಗ್ಗೆ ಅತಿಯಾದ ನಿರೀಕ್ಷೆ ಬೇಡ: ಕಪಿಲ್ ಕಿವಿಮಾತು
ಕಪಿಲ್ ದೇವ್ Photo: screengrab/ x.com/ANI
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡಕ್ಕೆ 15ನೇ ವಯಸ್ಸಿನಲ್ಲೇ ಪದಾರ್ಪಣೆ ಮಾಡುವ ಅವಕಾಶ ಲಭಿಸಿರುವ ಯುವ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ ವಿಚಾರದಲ್ಲಿ ತಾಳ್ಮೆಯಿಂದ ಇರುವಂತೆ ಹಿರಿಯ ಆಟಗಾರ ಕಪಿಲ್ ದೇವ್ ಸಲಹೆ ಮಾಡಿದ್ದಾರೆ. ವೃತ್ತಿಜೀವನದ ಆರಂಭಿಕ ಹಂತದಲ್ಲೇ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂಬ ಕಿವಿಮಾತು ಹೇಳಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸೂರ್ಯವಂಶಿ ಇತ್ತೀಚೆಗೆ ಮುರಿದಿದ್ದರು. ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧ ನಡೆಯುವ ಟಿ20 ಸರಣಿಗೆ ಮತ್ತು ಜಪಾನ್ನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಸೂರ್ಯವಂಶಿ ಆಯ್ಕೆಯಾಗಿದ್ದಾರೆ.
ಸೂರ್ಯವಂಶಿಯನ್ನು ವಿಶೇಷ ಪ್ರತಿಭೆ ಎಂದು ಬಣ್ಣಿಸಿದ ಕಪಿಲ್ ದೇವ್, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಅವರಿಗೆ ಸಮಯಾವಕಾಶ ಬೇಕು ಎಂದು ವಿಶ್ಲೇಷಿಸಿದ್ದಾರೆ. "ಅವರು ವಿಶೇಷ ಪ್ರತಿಭೆ; ಅವರಿಗೆ ಸಮಯಾವಕಾಶ ನೀಡಿ. ಖಂಡಿತವಾಗಿಯೂ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ನನ್ನ ಪ್ರಕಾರ ಅವರದ್ದು ನಂಬಲಸಾಧ್ಯ ಪ್ರತಿಭೆ. ಆದಾಗ್ಯೂ ಭಾರತ ತಂಡದಲ್ಲಿ ಅವರು ಹೊಂದಿಕೊಳ್ಳಬೇಕು. ಕ್ಷಮತೆ ಕಾಪಾಡಿಕೊಳ್ಳಬೇಕು. ರಾಷ್ಟ್ರೀಯ ತಂಡದ ಭಾಗವಾಗಿದ್ದಾಗ ಇತರ ಹಲವು ಘಟನೆಗಳು ಸಂಭವಿಸುತ್ತವೆ" ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಅವರು ಹೇಳಿದ್ದಾರೆ.
"ಅವರು ಎಷ್ಟು ಗಮನ ಕೇಂದ್ರೀಕರಿಸಬಲ್ಲರು ಎನ್ನುವುದಕ್ಕೆ ಅವರೇ ಉತ್ತರಿಸಬೇಕು. ಆದರೆ ನನ್ನ ಪ್ರಕಾರ ಅವರು ವಿಶೇಷ ಪ್ರತಿಭೆ" ಎಂದು ಬಣ್ಣಿಸಿದ್ದಾರೆ. ದೇಶಿ ಕ್ರಿಕೆಟ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ದೊಡ್ಡ ವ್ಯತ್ಯಾಸವಿದ್ದು, ಹದಿಹರೆಯದ ಆಟಗಾರನಿಂದ ತಕ್ಷಣ ಫಲಿತಾಂಶ ನಿರೀಕ್ಷಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.