×
Ad

FIFA World Cup 2026 | ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗೋಲು ಗಳಿಸಿ ಬ್ರೆಝಿಲ್ ದಾಖಲೆ ಮುರಿದ ಜರ್ಮನಿ

ಕ್ಯುರಾಕೊ ವಿರುದ್ಧ 7–1 ಗೆಲುವು; ಹಾವರ್ಟ್ಜ್ ಅವಳಿ ಗೋಲು

Update: 2026-06-15 21:37 IST

Photo Credit : PTI 

ಹ್ಯೂಸ್ಟನ್, ಜೂ.15: ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡವು ಭರ್ಜರಿ ಗೆಲುವಿನೊಂದಿಗೆ 2026ರ FIFA ವಿಶ್ವಕಪ್‌ ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಹೊಸ ಇತಿಹಾಸವನ್ನೂ ನಿರ್ಮಿಸಿದೆ.

ಜರ್ಮನಿ ತಂಡವು ರವಿವಾರ ನಡೆದ ‘E’ ಗುಂಪಿನ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಕ್ಯುರಾಕೊ ತಂಡವನ್ನು 7–1 ಗೋಲುಗಳ ಅಂತರದಿಂದ ಸುಲಭವಾಗಿ ಮಣಿಸಿತು. ಇದರೊಂದಿಗೆ FIFA ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿದ ತಂಡವಾಗಿ ಹೊರಹೊಮ್ಮಿ ಬ್ರೆಝಿಲ್ ತಂಡದ ದಾಖಲೆಯನ್ನು ಮುರಿದಿದೆ.

ಐದು ಬಾರಿಯ ಚಾಂಪಿಯನ್ ಬ್ರೆಝಿಲ್ನ ವಿಶ್ವಕಪ್ ಗೋಲುಗಳ ದಾಖಲೆ (238) ಮುರಿಯಲು ಜರ್ಮನಿಗೆ ಐದು ಗೋಲುಗಳ ಅಗತ್ಯವಿತ್ತು. ಎನ್ಆರ್ಜಿ ಸ್ಟೇಡಿಯಂನಲ್ಲಿ ಏಳು ಗೋಲುಗಳನ್ನು ಬಾರಿಸಿದ ಜರ್ಮನಿ ತಂಡವು ತನ್ನ ಒಟ್ಟು ಗೋಲುಗಳ ಸಂಖ್ಯೆಯನ್ನು 239ಕ್ಕೆ ಏರಿಸಿಕೊಂಡಿತು.

ಈ ಸಾಧನೆಯು ಜರ್ಮನಿಯ ಭವ್ಯ ವಿಶ್ವಕಪ್ ಪರಂಪರೆಗೆ ಮತ್ತೊಂದು ಅಧ್ಯಾಯವನ್ನು ಸೇರಿಸಿದೆ. ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದ ಆತಿಥ್ಯದಲ್ಲಿ ನಡೆಯುತ್ತಿರುವ ಅತಿದೊಡ್ಡ ಪಂದ್ಯಾವಳಿಯಲ್ಲಿ ಬ್ರೆಝಿಲ್ನೊಂದಿಗೆ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಪಂದ್ಯದ ಆರಂಭದಲ್ಲಿ ಕ್ಯುರಾಕೊ ತಂಡವು ಜರ್ಮನಿಗೆ ಒಂದಷ್ಟು ಪರೀಕ್ಷೆಯೊಡ್ಡಿತು. ವಿಶ್ವಕಪ್‌ ನಲ್ಲಿ ಭಾಗವಹಿಸುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರವಾದ ಕ್ಯುರಾಕೊ ತಂಡವು ಮೊದಲಾರ್ಧದಲ್ಲಿ ಗಮನಾರ್ಹ ಹೋರಾಟ ನೀಡಿತು.

ಆರನೇ ನಿಮಿಷದಲ್ಲಿ ಫೆಲಿಕ್ಸ್ ಮೆಚಾ ಗೋಲು ಗಳಿಸಿ ಜರ್ಮನಿಗೆ 1–0 ಮುನ್ನಡೆ ಒದಗಿಸಿದರು. 21ನೇ ನಿಮಿಷದಲ್ಲಿ ಲಿವಾನೊ ಕೊಮೆನೆನ್ಸಿಯಾ ಗೋಲು ಗಳಿಸಿ ಸ್ಕೋರ್ ಅನ್ನು 1–1ರಿಂದ ಸಮಬಲಗೊಳಿಸಿದರು. ಇದರಿಂದ ಜರ್ಮನಿ ಅಭಿಮಾನಿಗಳು ನಿಬ್ಬೆರಗಾದರೆ, ಕ್ಯುರಾಕೊ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

38ನೇ ನಿಮಿಷದವರೆಗೆ ಕ್ಯುರಾಕೊ ತಂಡವು ಜರ್ಮನಿಯನ್ನು ಕಟ್ಟಿಹಾಕಿತು. ಆದರೆ ನಿಕೊ ಸ್ಕ್ಲೋಟರ್ಬೆಕ್ 38ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಗಳಿಸಿ ಜರ್ಮನಿಗೆ ಮತ್ತೆ ಮುನ್ನಡೆ ತಂದರು.

ಮೊದಲಾರ್ಧದ ಹೆಚ್ಚುವರಿ ಅವಧಿಯಲ್ಲಿ (45+5) ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಕಾಯ್ ಹಾವರ್ಟ್ಜ್ ಜರ್ಮನಿಗೆ 3–1 ಮುನ್ನಡೆ ಒದಗಿಸಿ ಎದುರಾಳಿಯ ಪ್ರತಿರೋಧಕ್ಕೆ ಕಡಿವಾಣ ಹಾಕಿದರು.

ದ್ವಿತೀಯಾರ್ಧದಲ್ಲಿ ಜರ್ಮನಿ ತನ್ನ ಪ್ರಾಬಲ್ಯ ಮುಂದುವರಿಸಿತು. ಜಮಾಲ್ ಮುಸಿಯಾಲಾ 47ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಥಾನೀಲ್ ಬ್ರೌನ್ (68ನೇ ನಿಮಿಷ) ಹಾಗೂ ಡೆನಿಝ್ ಉಂಡಾವ್ (78ನೇ ನಿಮಿಷ) ತಲಾ ಒಂದು ಗೋಲು ಸೇರಿಸಿ ಮುನ್ನಡೆಯನ್ನು ವಿಸ್ತರಿಸಿದರು.

ಪಂದ್ಯ ಅಂತ್ಯಕ್ಕೆ ಎರಡು ನಿಮಿಷ ಬಾಕಿ ಇರುವಾಗ 88ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಹಾವರ್ಟ್ಜ್ ಜರ್ಮನಿಗೆ 7–1 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.

ಜರ್ಮನಿಯ ಈ ಗೆಲುವು 2014ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಬ್ರೆಝಿಲ್ ವಿರುದ್ಧ ದಾಖಲಿಸಿದ್ದ 7–1 ಅಂತರದ ಜಯವನ್ನು ನೆನಪಿಸಿತು.

ಆದರೆ ಜರ್ಮನಿ ತಂಡವು ಕಳೆದ ಎರಡು ಆವೃತ್ತಿಗಳ ವಿಶ್ವಕಪ್ಗಳಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ತಂಡವು ತನ್ನ ಮುಂದಿನ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡವನ್ನು ಎದುರಿಸಲಿದೆ.

FIFA ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿದ ತಂಡಗಳು

• ಜರ್ಮನಿ – 239

• ಬ್ರೆಝಿಲ್ – 238

• ಅರ್ಜೆಂಟೀನಾ – 152

• ಫ್ರಾನ್ಸ್ – 136

• ಇಟಲಿ – 128

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News