IPL 2026 | ಪ್ಲೇ ಆಫ್ ತಂಡಗಳು ಅಂತಿಮ : ಆರ್‌ಸಿಬಿ-ಗುಜರಾತ್, ರಾಜಸ್ಥಾನ-ಹೈದರಾಬಾದ್ ಹಣಾಹಣಿ
Photo : X@IPL
ಹೊಸದಿಲ್ಲಿ, ಮೇ 24: ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸುತ್ತಿನಲ್ಲಿ ಆಡಲಿರುವ ನಾಲ್ಕು ತಂಡಗಳು ಅಧಿಕೃತವಾಗಿ ಖಚಿತವಾಗಿವೆ.
ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿದ ನಂತರ ನಾಲ್ಕನೇ ಹಾಗೂ ಕೊನೆಯ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿತ್ತು.
ರವಿವಾರ ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಕೊನೆಗೂ ನಾಲ್ಕನೇ ಪ್ಲೇ ಆಫ್ ಸ್ಥಾನ ಗಿಟ್ಟಿಸಿಕೊಂಡಿದೆ.
ಪ್ಲೇ ಆಪ್ ತಂಡಗಳು ಅಂತಿಮಗೊಂಡ ಹಿನ್ನೆಲೆಯಲ್ಲಿ 2026ರ ಐಪಿಎಲ್‌ನ ಪ್ಲೇ ಆಫ್ ಸುತ್ತಿನ ಸಂಪೂರ್ಣ ವೇಳಾಪಟ್ಟಿ, ಸ್ಥಳಗಳು ಹಾಗೂ ಪಂದ್ಯಗಳ ಸಮಯ ನಿರ್ಧಾರವಾಗಿದೆ.
► ಇದು ಕ್ವಾಲಿಪೈಯರ್ -1: ಐಪಿಎಲ್ ಅಂಕಪಟ್ಟಿಯ ಅಗ್ರ ಎರಡು ತಂಡಗಳ ನಡುವೆ ಕ್ವಾಲಿಪೈಯರ್-1 ನಡೆಯಲಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ತಂಡವು ‘ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ಮೇ 26ರಂದು ನಡೆಯಲಿರುವ ಕ್ವಾಲಿಪೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡವು 2026ರ ಐಪಿಎಲ್ ಟೂರ್ನಿಯ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಈ ಪಂದ್ಯದಲ್ಲಿ ಸೋಲುವ ತಂಡವು ಕ್ವಾಲಿಪೈಯರ್-2ರಲ್ಲಿ ಮತ್ತೊಂದು ಅವಕಾಶ ಪಡೆಯಲಿದೆ.
► ಎಲಿಮಿನೇಟರ್: ಈ ಸುತ್ತಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಹಣಾಹಣಿ ನಡೆಸಲಿದ್ದು, ಸೋಲುವ ತಂಡವು ಪಂದ್ಯಾವಳಿಯಿಂದ ನಿರ್ಗಮಿಸಲಿದೆ.
ಎಲಿಮಿನೇಟರ್ ಸುತ್ತಿನಲ್ಲಿ ಗೆಲ್ಲುವ ತಂಡವು ಕ್ವಾಲಿಪೈಯರ್-2ಕ್ಕೆ ಅರ್ಹತೆ ಪಡೆಯಲಿದೆ. ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಕ್ವಾಲಿಪೈಯರ್-1ರಲ್ಲಿ ಸೋತ ತಂಡವನ್ನು ಎದುರಿಸಲಿದೆ.