×
Ad

ಐರ್ಲ್ಯಾಂಡ್, ಇಂಗ್ಲೆಂಡ್ ವಿರುದ್ಧ T20 ಪಂದ್ಯ | ಸಿರಾಜ್ ಅಲಭ್ಯ; ಕನ್ನಡಿಗ ಪ್ರಸಿದ್ಧ್‌ ಕೃಷ್ಣಗೆ ಅವಕಾಶ

Update: 2026-06-09 22:09 IST

ಮುಹಮ್ಮದ್ ಸಿರಾಜ್ | Photo Credit : PTI  

ಹೊಸದಿಲ್ಲಿ, ಜೂ.9: ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕೆಲಸದ ಒತ್ತಡವನ್ನು ನಿರ್ವಹಿಸುವ ಯೋಜನೆಯ ಭಾಗವಾಗಿ ಮುಂಬರುವ ಐರ್ಲ್ಯಾಂಡ್ ಹಾಗೂ ಇಂಗ್ಲೆಂಡ್ ನ T20 ಕ್ರಿಕೆಟ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾವು ಅನಿವಾರ್ಯವಾಗಿ ತಂಡದಲ್ಲಿ ಬದಲಾವಣೆ ಮಾಡಬೇಕಾಗಿದೆ.

ಮಂಡಳಿಯ ವೈದ್ಯಕೀಯ ತಂಡ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಡುವಿನ ಚರ್ಚೆಯ ನಂತರ ಸಿರಾಜ್‌ ಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಲು ಸಲಹೆ ನೀಡಲಾಗಿದೆ ಎಂದು BCCI ಮಂಗಳವಾರ ಘೋಷಿಸಿದೆ.

ಬಿಡುವಿಲ್ಲದ ಅಂತರರಾಷ್ಟ್ರೀಯ ಋತುವಿಗಿಂತ ಮೊದಲು ವೇಗದ ಬೌಲರ್ ಸಿರಾಜ್ ಸಂಪೂರ್ಣ ಚೇತರಿಸಿಕೊಳ್ಳುವುದನ್ನು ಖಚಿತಪಡಿಸಲು ಮುನ್ನಚ್ಚರಿಕೆಯ ಕ್ರಮವಾಗಿ ಈ ನಿರ್ಧಾರವನ್ನು ಕ್ರಿಕೆಟ್ ಮಂಡಳಿಯು ತೆಗೆದುಕೊಂಡಿದೆ.

ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ T20 ತಂಡದಲ್ಲಿ ಸಿರಾಜ್ ಆಯ್ಕೆಯಾಗಿದ್ದರು.

ಸಿರಾಜ್ನಿಂದ ತೆರವಾದ ಸ್ಥಾನವನ್ನು ತುಂಬಲು ಪುರುಷರ ಆಯ್ಕೆ ಸಮಿತಿಯು ಐರ್ಲ್ಯಾಂಡ್ ಹಾಗೂ ಇಂಗ್ಲೆಂಡ್ ಸರಣಿಗಾಗಿ ಇನ್ನೋರ್ವ ವೇಗಿ ಪ್ರಸಿದ್ಧ ಕೃಷ್ಣಗೆ ಮಣೆ ಹಾಕಿದೆ. ಕರ್ನಾಟಕದ ವೇಗಿ ದೇಶೀಯ ಹಾಗೂ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ T20 ತಂಡಕ್ಕೆ ವಾಪಸಾಗುತ್ತಿದ್ದಾರೆ.

2028ರ T20 ವಿಶ್ವಕಪ್ ಹಾಗೂ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಐಸಿಸಿ ಟೂರ್ನಿಗಳಿಗೆ ಭಾರತ ತಂಡವು ತಯಾರಿ ಆರಂಭಿಸಿದ್ದು, ಆಯ್ಕೆ ಸಮಿತಿಯು ಹೊಸಬರನ್ನು ಒಳಗೊಂಡ T20 ತಂಡವನ್ನು ಆಯ್ಕೆ ಮಾಡಿತ್ತು. ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಅಯ್ಯರ್‌ ಗೆ ನಾಯಕತ್ವ ವಹಿಸಲಾಗಿದ್ದು, ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ.

ಬಿಹಾರದ 15 ವರ್ಷದ ವೈಭವ್ ಸೂರ್ಯವಂಶಿ ಸೇರ್ಪಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 2026ರ ಐಪಿಎಲ್ ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನವನ್ನು ಆಧರಿಸಿ ವೈಭವ್ ಇದೇ ಮೊದಲ ಬಾರಿ T20 ತಂಡದಲ್ಲಿ ಸ್ಥಾನ ಪಡೆದಿದ್ದರು.

ಭಾರತ ತಂಡವು ಜೂನ್ 26 ಹಾಗೂ ಜೂನ್ 28ರಂದು ಬೆಲ್ಫಾಸ್ಟ್ ನಲ್ಲಿ ಐರ್ಲ್ಯಾಂಡ್ ವಿರುದ್ಧ ಎರಡು ಪಂದ್ಯಗಳ T20 ಸರಣಿಯನ್ನು ಆಡುವ ಮೂಲಕ ತನ್ನ ಪ್ರವಾಸವನ್ನು ಆರಂಭಿಸಲಿದೆ. ಜುಲೈ 1ರಿಂದ 11ರ ತನಕ ಐದು ಪಂದ್ಯಗಳ T20 ಸರಣಿಯನ್ನಾಡಲು ಇಂಗ್ಲೆಂಡ್ ಗೆ ಪ್ರವಾಸ ಕೈಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News