ಭಾರತೀಯರು ಕೈಕುಲುಕದಿದ್ದರೆ ನಿರ್ಲಕ್ಷಿಸಿ: ಪಾಕ್ ಹಾಕಿ ತಂಡಕ್ಕೆ ಸೂಚನೆ
ಸಾಂದರ್ಭಿಕ ಚಿತ್ರ |Photo Credit : NDTV
ಇಸ್ಲಾಮಾಬಾದ್, ಅ. 13: ಮಲೇಶ್ಯದ ಜೋಹರ್ ಬಹ್ರು ಎಂಬಲ್ಲಿ ಮಂಗಳವಾರ ನಡೆಯಲಿರುವ ಭಾರತದ ವಿರುದ್ಧದ ಸುಲ್ತಾನ್ ಆಫ್ ಜೊಹೊರ ಕಪ್ ಹಾಕಿ ಪಂದ್ಯದಲ್ಲಿ ಭಾರತೀಯ ಆಟಗಾರರೊಂದಿಗೆ ಸಂಘರ್ಷಕ್ಕೆ ಇಳಿಯದಂತೆ ತನ್ನ ತಂಡಕ್ಕೆ ಪಾಕಿಸ್ತಾನ ಹಾಕಿ ಫೆಡರೇಶನ್ ಸೂಚನೆ ನೀಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆದ ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರ ಕೈಕುಲುಕಲು ನಿರಾಕರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡದಿಂದ ಇಂಥದೇ ವರ್ತನೆಯನ್ನು ನಿರೀಕ್ಷಿಸಲಾಗಿದೆ.
ಭಾರತೀಯ ಆಟಗಾರರು ಕೈಕುಲುಕಲು ನಿರಾಕರಿಸುವ ಸಾಧ್ಯತೆಗೆ ಪಾಕಿಸ್ತಾನಿ ಆಟಗಾರರನ್ನು ತಯಾರುಗೊಳಿಸಲಾಗಿದೆ ಎಂದು ಪಾಕಿಸ್ತಾನ್ ಹಾಕಿ ಫೆಡರೇಶನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘‘ಪಂದ್ಯದ ಮೊದಲು ಅಥವಾ ನಂತರ ಭಾರತೀಯ ಆಟಗಾರರು ಕೈಕುಲುಕಲು ನಿರಾಕರಿಸಿದರೆ ಅದನ್ನು ನಿರ್ಲಕ್ಷಿಸಿ ಮತ್ತು ಮುಂದೆ ಸಾಗಿ ಎಂಬುದಾಗಿ ಆಟಗಾರರಿಗೆ ತಿಳಿಸಲಾಗಿದೆ. ಪಂದ್ಯದ ವೇಳೆ ಯಾವುದೇ ಭಾವನಾತ್ಮಕ ಸಂಘರ್ಷಗಳು ಅಥವಾ ಸಂಜ್ಞೆಗಳಿಂದಲೂ ದೂರವಿರುವಂತೆ ಅವರಿಗೆ ಸೂಚಿಸಲಾಗಿದೆ’’ ಎಂದರು.