ಸ್ಕ್ಯಾನಿಂಗ್‌ಗಾಗಿ ಸ್ವದೇಶಕ್ಕೆ ವಾಪಸಾದ ಆರ್‌ಸಿಬಿ ಅಟಗಾರ ಫಿಲ್ ಸಾಲ್ಟ್
ಫಿಲ್ ಸಾಲ್ಟ್ | Photo Credit : PTI
ಹೊಸದಿಲ್ಲಿ, ಮೇ 4: ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಬೆರಳು ಗಾಯದ ಸ್ಕ್ಯಾನಿಂಗ್‌ಗಾಗಿ ಸ್ವದೇಶಕ್ಕೆ ವಾಪಸಾಗಿದ್ದು, ಐಪಿಎಲ್ ಟೂರ್ನಿಯ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿನ್ನಡೆ ಅನುಭವಿಸಿದೆ. ಸಾಲ್ಟ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ತಕ್ಷಣವೇ ಲಭ್ಯವಿರುವ ಸಾಧ್ಯತೆ ಇಲ್ಲವಾಗಿದೆ.
ಅಗ್ರ ಸರದಿಯ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಸಾಲ್ಟ್ ಅವರು ಈಗಾಗಲೆ ಆರ್‌ಸಿಬಿ ಆಡಿರುವ ಹಿಂದಿನ ಮೂರು ಪಂದ್ಯಗಳಿಂದ ವಂಚಿತರಾಗಿದ್ದಾರೆ.
ಎಪ್ರಿಲ್ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರ್‌ಸಿಬಿ ತಂಡ ಸೋತ ಪಂದ್ಯದಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವಾರ್ ಲೆಗ್‌ನಲ್ಲಿ ಡೈವ್ ಮೂಲಕ ಚೆಂಡನ್ನು ತಡೆಯಲು ಯತ್ನಿಸುತ್ತಿದ್ದಾಗ 28ರ ಹರೆಯದ ಸಾಲ್ಟ್ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಇಂಗ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್‌ನ ಕೋರಿಕೆಯ ಮೇರೆಗೆ ಸಾಲ್ಟ್ ಬ್ರಿಟನ್‌ಗೆ ವಾಪಸಾಗಿದ್ದಾರೆ. ಅವರೀಗ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ. ಸಾಲ್ಟ್ ಅವರು ಶೀಘ್ರವೇ ಚೇತರಿಸಿಕೊಂಡು, ಈ ತಿಂಗಳಾಂತ್ಯದಲ್ಲಿ ವಾಪಸಾಗುವ ನಿರೀಕ್ಷೆಯಲ್ಲಿ ಆಟಗಾರ ಹಾಗೂ ಫ್ರಾಂಚೈಸಿ ವಿಶ್ವಾಸದಲ್ಲಿದ್ದಾರೆ.
ಸಾಲ್ಟ್ ಈ ಋತುವಿನ ಐಪಿಎಲ್‌ನಲ್ಲಿ ಆರು ಇನಿಂಗ್ಸ್‌ಗಳಲ್ಲಿ 168.33ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 202 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಜೊತೆಗೂಡಿ ಸ್ಫೋಟಕ ಆರಂಭ ಒದಗಿಸಿದ್ದಾರೆ.
ಸಾಲ್ಟ್ ಅನುಪಸ್ಥಿತಿಯಲ್ಲಿ ಅವರದೇ ದೇಶದ ಜೇಕಬ್ ಬೆಥೆಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಅವರು ಮೂರು ಇನಿಂಗ್ಸ್‌ಗಳಲ್ಲಿ 39 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಇನ್ನಷ್ಟೇ ಗಮನಾರ್ಹ ಪ್ರದರ್ಶನ ನೀಡಬೇಕಾಗಿದೆ. ಸಾಲ್ಟ್ ಬದಿಗೆ ಸರಿದ ಕಾರಣ ಅಗ್ರ ಸರದಿಯಲ್ಲಿ ಬೆಥೆಲ್ ಇನ್ನಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
ಸಾಲ್ಟ್ ಗಾಯದ ಸಮಸ್ಯೆಯಿಂದ ಹಿನ್ನಡೆ ಅನುಭವಿಸಿದ್ದರೂ ಆರ್‌ಸಿಬಿ ಈ ವರ್ಷ ಉತ್ತಮ ಪ್ರದರ್ಶನ ನೀಡುತ್ತಿದೆ. ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಂತರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸಾಲ್ಟ್ ಗಾಯದ ಸಮಸ್ಯೆ ಬೇಗನೆ ಬಗೆಹರಿಯಲಿದೆ. ಆರ್‌ಸಿಬಿ ತಂಡವನ್ನು ಪ್ಲೇ ಆಫ್‌ನತ್ತ ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಆಶಾವಾದದಲ್ಲಿದೆ.
ಐಪಿಎಲ್ ನಿಯಮಗಳ ಪ್ರಕಾರ, ಋತುವಿನ ಅಂತ್ಯದಲ್ಲಿ ಬದಲಿ ಆಟಗಾರರನ್ನು ಆರ್‌ಸಿಬಿ ಪರಿಗಣಿಸಬಹುದು. ಆದರೆ ಇದೀಗ ಸಾಲ್ಟ್ ಅವರ ಚೇತರಿಕೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.