ಭಾರತ ‘ಎ’ ತಂಡದ ಪರ ಚೊಚ್ಚಲ ಪಂದ್ಯ; 14 ರನ್ ಗಳಿಸಿದ ಸೂರ್ಯವಂಶಿ
ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ, ಜೂ.9: ಡಾಂಬುಲ್ಲಾದಲ್ಲಿ ಮಂಗಳವಾರ ನಡೆದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರ ತನ್ನ ಮೊದಲ ಪಂದ್ಯ ಆಡಿದ ವೈಭವ್ ಸೂರ್ಯವಂಶಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಸೂರ್ಯವಂಶಿ 12 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಿತ 14 ರನ್ ಗಳಿಸಿ ಮುಹಮ್ಮದ್ ಶಿರಾಝ್ ಗೆ ವಿಕೆಟ್ ಒಪ್ಪಿಸಿದರು.
ಭಾರತದ ಬ್ಯಾಟಿಂಗ್ನ ಪ್ರತಿಭಾವಂತ ಆಟಗಾರ ಸೂರ್ಯವಂಶಿ ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲ್ಯಾಂಡ್ ವಿರುದ್ಧದ T20 ಸರಣಿಗಾಗಿ ಮೊದಲ ಬಾರಿ ಟೀಮ್ ಇಂಡಿಯಾವನ್ನು ಸೇರಿದ್ದರು.
15 ವರ್ಷದ ಸೂರ್ಯವಂಶಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾಗುವ ಸಿದ್ಧತೆಯಲ್ಲಿದ್ದಾರೆ. ಈ ಮೂಲಕ 1989ರಲ್ಲಿ ಪಾಕಿಸ್ತಾನದ ವಿರುದ್ಧ 16 ವರ್ಷ, 205 ದಿನಗಳ ವಯಸ್ಸಿನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ.
ರಾಜಸ್ಥಾನ ರಾಯಲ್ಸ್ ಪರ ಈ ವರ್ಷದ ಐಪಿಎಲ್ ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ನಂತರ ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸೂರ್ಯವಂಶಿ ಐಪಿಎಲ್ ನ 16 ಇನಿಂಗ್ಸ್ಗಳಲ್ಲಿ 237.30ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 776 ರನ್ ಗಳಿಸಿ ಪಂದ್ಯಾವಳಿಯ ಅಗ್ರ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ 175 ರನ್ ಗಳಿಸಿದ್ದ ಸೂರ್ಯವಂಶಿ, ಭಾರತದ ಅಂಡರ್–19 ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.