×
Ad

ಬೆಂಗಳೂರಿಗೆ ಬಂದ ಉಗಾಂಡಾ ಪ್ರಜೆಯ ಎಬೋಲಾ ಪರೀಕ್ಷಾ ವರದಿ “ನೆಗೆಟಿವ್”: ಸ್ಪಷ್ಟನೆ ನೀಡಿದ ವೈದ್ಯರು

ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣ ದೃಢಪಟ್ಟಿಲ್ಲ: ಆರೋಗ್ಯ ಸಚಿವಾಲಯ ಮಾಹಿತಿ

Update: 2026-05-27 14:54 IST

Photo credit : AI

ಬೆಂಗಳೂರು: ಪೂರ್ವ ಆಫ್ರಿಕಾದಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದ ಉಗಾಂಡಾ ಪ್ರಜೆಯಲ್ಲಿ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ಬೆಂಗಳೂರಿನ ʼಸರಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆʼಯ ವೈದ್ಯಕೀಯ ಅಧೀಕ್ಷಕ ಅನಿಲ್ ಕುಮಾರ್ ಬನಾಗಾರ್ ಸ್ಪಷ್ಟಪಡಿಸಿದ್ದಾರೆ.

ಮಹಿಳೆಯ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದೆ. ವರದಿಯು ನೆಗೆಟಿವ್ ಬಂದಿದೆ ಎಂದು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ತಿಳಿಸಿದೆ.

“ಶಿಷ್ಟಾಚಾರದ ಪ್ರಕಾರ, 48 ಗಂಟೆಗಳ ವೀಕ್ಷಣೆಯ ನಂತರ ಮರು ಪರೀಕ್ಷೆಯನ್ನು ನಡೆಸಬೇಕು. ಆದರೆ, ಮಹಿಳೆಗೆ ಇಲ್ಲಿಯವರೆಗೆ ಯಾವುದೇ ಹೆಚ್ಚುವರಿ ಲಕ್ಷಣಗಳು ಕಂಡುಬಂದಿಲ್ಲವಾದ್ದರಿಂದ ಮರುಪರೀಕ್ಷೆಯ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಡಾ. ಬನಾಗಾರ್ ಹೇಳಿದರು.

ಈ ಮಧ್ಯೆ, ಭಾರತದಲ್ಲಿ ಎಬೋಲಾ ವೈರಸ್ ರೋಗದ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

28 ವರ್ಷದ ಮಹಿಳೆಗೆ ಮೈಕೈ ನೋವು ಸೇರಿದಂತೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಮಂಗಳವಾರ ಬೆಂಗಳೂರಿನ ಹೋಟೆಲ್‌ನಿಂದ ʼಸರಕಾರಿ ಸಾಂಕ್ರಾಮಿಕ ರೋಗಗಳ ಆಸ್ಪತ್ರೆʼಗೆ ಸ್ಥಳಾಂತರಿಸಲಾಯಿತು. ಮತ್ತು ಕ್ವಾರೆಂಟೈನ್ ನಲ್ಲಿ ಇರಿಸಲಾಯಿತು. ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಎಬೋಲಾ ಪರೀಕ್ಷೆಗಾಗಿ ಪುಣೆಯ NIV ಗೆ ಕಳುಹಿಸಲಾಗಿತ್ತು.

ಅವರು ಇತ್ತೀಚೆಗೆ ಉಗಾಂಡಾದಿಂದ ಅಹಮದಾಬಾದ್‌ಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ವರದಿಯಾದ ಎಬೋಲಾ ಉಲ್ಭಣದ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News