ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿ ಜಾರಿಗೊಳಿಸಲಾಗಿದ್ದ ಕಾಯ್ದೆಗೆ ಸಾಂವಿಧಾನಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ, ಅದನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಶನಿವಾರ ಪ್ರಧಾನಿ ಮೋದಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿರುವ ಡಿ.ಕೆ.ಶಿವಕುಮಾರ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಎಸ್‍ಸಿ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‍ಟಿ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದ್ದು, ಈ ಸಂಬಂಧ ವಿಧಾನ ಮಂಡಲದಲ್ಲಿ ಕಾಯ್ದೆಯನ್ನು ಮಂಡಿಸಿ, ಅಂಗೀಕರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

2026ರ ಅಕ್ಟೋಬರ್ 12ರಂದು ಹೈಕೋರ್ಟ್ ನೀಡಿದ ತೀರ್ಪಿನಲ್ಲಿ, ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗಿದ್ದು, ಇದು ಶೇ.50ರ ಸಾಂವಿಧಾನಿಕ ಮಿತಿಯನ್ನು ಮೀರಿದೆ ಎಂಬ ಕಾರಣ ನೀಡಿ ಮೀಸಲಾತಿ ಹೆಚ್ಚಳದ ಅಂಶಗಳನ್ನು ರದ್ದುಗೊಳಿಸಿತ್ತು. ಸರಕಾರವು ಈಗಾಗಲೇ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆದರೆ, ನ್ಯಾಯಾಂಗ ಪ್ರಕ್ರಿಯೆಗಳು ಬಾಕಿ ಇವೆ ಎಂಬ ಕಾರಣಕ್ಕೆ ಕೇಂದ್ರವು ತನ್ನ ನಿರ್ಧಾರವನ್ನು ಅನಿರ್ದಿಷ್ಟಾ ವಧಿಯವರೆಗೆ ಮುಂದೂಡಬಾರದು ಮತ್ತು ಶಾಸಕಾಂಗದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಮನವಿ ಹೊಸದಲ್ಲ: ಕರ್ನಾಟಕದ ಈ ಮನವಿಯು ಇತ್ತೀಚಿನದಲ್ಲ ಅಥವಾ ಕೇವಲ ಪ್ರಸ್ತುತ ತೀರ್ಪಿಗೆ ಪ್ರತಿಕ್ರಿಯೆಯಾಗಿ ಮಾಡಿದ್ದಲ್ಲ. ರಾಜ್ಯ ಸರಕಾರವು 2023ರ ಮಾರ್ಚ್ 23ರಂದೇ ಕೇಂದ್ರಕ್ಕೆ ತನ್ನ ಪ್ರಸ್ತಾವ ಸಲ್ಲಿಸಿತ್ತು. ತದನಂತರ, ರಾಜ್ಯದ ಹೆಚ್ಚಿಸಿದ ಮೀಸಲಾತಿ ಚೌಕಟ್ಟಿಗೆ ಸಾಂವಿಧಾನಿಕ ರಕ್ಷಣೆ ಕೋರಿ 2025ರ ಡಿಸೆಂಬರ್ 18ರಂದು ವಿಧಾನಸಭೆಯು ನಿರ್ಣಯವನ್ನು ಅಂಗೀಕರಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು 2026ರ ಎಪ್ರಿಲ್ 16ರಂದು ತಮಗೆ ವಿವರವಾದ ಪತ್ರ ಬರೆದು, ಈ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ ಪುನರುಚ್ಚರಿಸಿದ್ದರು ಎಂದು ತಿಳಿಸಿದ್ದಾರೆ.

1994ರಲ್ಲಿ ಸಂವಿಧಾನದ 76ನೇ ತಿದ್ದುಪಡಿಯ ಮೂಲಕ ತಮಿಳುನಾಡಿನ ಶೇ.69ರಷ್ಟು ಮೀಸಲಾತಿ ಕಾಯ್ದೆಯನ್ನು ಸಂಸತ್ತು 9ನೇ ಅನುಸೂಚಿಗೆ ಸೇರಿಸಿ ರಕ್ಷಣೆ ನೀಡಿದ್ದನ್ನು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ವರದಿ ಮತ್ತು 2011ರ ಜನಗಣತಿಯ ಆಧಾರದ ಮೇಲೆ ಕರ್ನಾಟಕವು ಶೇ.56ರಷ್ಟು ಮೀಸಲಾತಿ ಕೇಳುತ್ತಿದ್ದು, ತಮಿಳುನಾಡಿಗೆ ನೀಡಿದ ಮಾದರಿಯಲ್ಲೇ ಕರ್ನಾಟಕದ ಮನವಿಯನ್ನೂ ಪರಿಗಣಿಸಬೇಕು ಎಂದು ಅವರು ಕೋರಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor