ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದಾರೆ : ಜಿ.ಪರಮೇಶ್ವರ್
"ನ.25ರಂದು ಪ್ರತಿಭಟನಾಕಾರರೊಂದಿಗೆ ಸಿಎಂ ಚರ್ಚೆ"
ಬೆಂಗಳೂರು: ಈಗಾಗಲೇ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ. ನನ್ನನ್ನು ನಂಬಿ, ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೇ ಭರವಸೆ ನೀಡಿದಾಗ ಅವರ ಮಾತಿನ ಮೇಲೆ ವಿಶ್ವಾಸವಿಡಬೇಕಲ್ಲವೇ? ವಿಶ್ವಾಸವಿಲ್ಲದಿದ್ದರೆ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಇಂದು ಸದಾಶಿವನಗರದಲ್ಲಿರುವ ತಮ್ಮ ಗೃಹ ಕಚೇರಿ ಬಳಿ ವಿವಿಧ ವಿಚಾರಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ.25ರ ಸಂಜೆ ಮುಖ್ಯಮಂತ್ರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಹಿಂದೆ ನೀಡಿರುವ ಭರವಸೆಗಳನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರ ಖಂಡಿತವಾಗಿಯೂ ಸಮಸ್ಯೆ ಬಗೆಹರಿಸಲಿದೆ. ಪ್ರತಿಭಟನಾಕಾರರು ಸ್ವಲ್ಪ ತಾಳ್ಮೆಯಿಂದ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಡಬೇಕು ಎಂದು ಮನವಿ ಮಾಡಿದರು.
ಲಿಖಿತ ಭರವಸೆ ನೀಡಬೇಕೆಂಬ ಪ್ರತಿಭಟನಾಕಾರರ ಬೇಡಿಕೆ ಕುರಿತು ಮಾತನಾಡಿದ ಅವರು, ಪ್ರತಿಭಟನೆಗಳ ಸಂದರ್ಭದಲ್ಲಿ ಲಿಖಿತ ಭರವಸೆ ನೀಡುವಂತೆ ಆಗ್ರಹಿಸುವುದು ಸಾಮಾನ್ಯ. ಇಂತಹ ಬೇಡಿಕೆಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ. ಆದರೆ, ಮುಖ್ಯವಾಗಿ ಅವರ ಸಮಸ್ಯೆ ಬಗೆಹರಿಯಬೇಕು. ಅವರ ಬೇಡಿಕೆ ಸರಿ ಅಥವಾ ತಪ್ಪು ಎಂದು ಚರ್ಚಿಸುವುದಕ್ಕಿಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಹೇಳಿದರು.