‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳ ಕಿರುಕುಳ ತಡೆಗೆ ಸರಕಾರದ ಚಿಂತನೆ : ನಾಳೆ ಸಿಎಂ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
ಸಿಎಂ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿನ ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳಿಂದ ಆಗುತ್ತಿರುವ ಕಿರುಕುಳದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾಯ್ದೆಯೊಂದನ್ನು ರೂಪಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿನ ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಚರ್ಚಿಸಲು ನಾಳೆ(ಜ.25) ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧ್ಯಕ್ಷತೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಹತ್ವದ ಸಭೆಯನ್ನು ಕರೆದಿದ್ದು, ಗೃಹ, ಕಾನೂನು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಈ ಮಧ್ಯೆ ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳ ಕಿರುಕುಳ ತಪ್ಪಿಸಲು ಆಗ್ರಹಿಸಿ ರಾಜ್ಯದ ವಿವಿಧೆಡೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮಹಿಳೆಯರು ತಮ್ಮ ‘ಮಾಂಗಲ್ಯ ಸರ’ವನ್ನು ಅಂಚೆ ಮೂಲಕ ರವಾನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲ ವಸೂಲಿ ನೆಪದಲ್ಲಿ ಕಿರುಕುಳ ನೀಡುವವರಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಗಂಭೀರವಾಗಿ ಪರಿಗಣಿಸಿದ್ದೇವೆ: ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳ ವಿಚಾರದ ಬಗ್ಗೆ ಗೃಹ, ಕಾನೂನು ಸಚಿವರು ಸೇರಿ ಸಮಾಲೋಚನೆ ನಡೆಸಿದ್ದು, ಈ ಬಗ್ಗೆ ನಾನು ಹಿಂದೆಯೇ ಅಧ್ಯಯನ ಮಾಡಿದ್ದೆ. ಕಾನೂನಾತ್ಮಕವಾಗಿ ಯಾವ ಕ್ರಮ ತೆಗೆದುಕೊಳ್ಳಬಹುದೆಂದು ಚರ್ಚೆ ಮಾಡುತ್ತೇವೆ. ಸದ್ಯದಲ್ಲಿಯೇ ಸರಕಾರದ ನಿರ್ಧಾರ ತಿಳಿಸಲಾಗುವುದು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಯ್ದೆ ರೂಪಿಸಿ: ‘ಸಾಲ ವಸೂಲಾತಿಗೆ ಮನೆಗೆ ಬಂದು ಕಿರುಕುಳ ಕೊಡುವುದನ್ನು ತಡೆಗಟ್ಟಿ. ದುಬಾರಿ, ಮಿತಿಮೀರಿದ ಬಡ್ಡಿ ವಿಧಿಸುವ ಕಂಪೆನಿಗಳನ್ನು ಪತ್ತೆಹಚ್ಚಿ ಶಿಕ್ಷೆ ನೀಡಿ. ಮೈಕ್ರೋ ಫೈನಾನ್ಸ್ ಗಳ ವ್ಯವಹಾರದ ನಿಯಂತ್ರಣಕ್ಕೆ ಸೂಕ್ತ ಕಾಯಿದೆ ರೂಪಿಸಿ. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳು ಬಡ ಮಧ್ಯಮ ವರ್ಗದವರಿಗೆ ಸಾಲ ಪಡೆಯಲು ನಿಯಮಗಳನ್ನು ಸರಳೀಕೃತಗೊಳಿಸಬೇಕು. ಸರಕಾರಗಳು ಕೃಷಿ, ಆರೋಗ್ಯ, ಶಿಕ್ಷಣ, ವಸತಿ ಮುಂತಾದ ಕ್ಷೇತ್ರಗಳಿಗೆ ಹಣ ಮೀಸಲಿಡಬೇಕು’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‍ಎಸ್) ಆಗ್ರಹಿಸಿದೆ.
ಕಠಿಣ ಕಾನೂನು ಜಾರಿ: ‘ಮೈಕ್ರೋ ಫೈನಾನ್ಸ್ ಸಂಸ್ಥೆ’ಗಳ ಕಿರುಕುಳ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಆದರೆ, ಬ್ಯಾಂಕ್ ನಿಯಮ ಪ್ರಕಾರ ವಸೂಲಾತಿಗೆ ಕಾನೂನು ಇದೆ. ಮತ್ತೊಂದೆಡೆ, ಅವರ ರಕ್ಷಣೆ ಮಾಡಲು ಕಾನೂನು ಇದೆ. ಹೀಗಾಗಿ, ಇದನ್ನು ಪರಿಶೀಲನೆ ನಡೆಸಿ ಕಾನೂನು ತಜ್ಞರ ಅಭಿಪ್ರಾಯಪಡೆದು ಶೀಘ್ರದಲ್ಲಿಯೇ ಕಿರುಕುಳ ತಪ್ಪಿಸಲು ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
‘ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ನಾಳೆ(ಜ.25) ಈ ವಿಚಾರವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ಕರೆದಿದ್ದಾರೆ. ಸಣ್ಣ-ಸಣ್ಣ ವ್ಯಕ್ತಿಗಳಿಗೆ ಆಗುತ್ತಿರುವ ಶೋಷಣೆಯನ್ನು ತಡೆಯಲು ವಿಶೇಷ ಕಾನೂನು ತರಲು ಉದ್ದೇಶಿಸಲಾಗಿದೆ. ಈಗಿರುವ ಕಾನೂನು ಅಷ್ಟು ಪ್ರಬಲವಾಗಿಲ್ಲ. ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾನೂನು ಇಲಾಖೆ ಮೈಕ್ರೋ ಫೈನಾನ್ಸ್ ರೆಗ್ಯುಲೇಶನ್ ಮನಿ ಲ್ಯಾಂಡ್ರಿಂಗ್ ಕರಡು ವಿಧೇಯಕದ ಕುರಿತು ಚರ್ಚಿಸಲಾಗುವುದು’
-ಎಚ್.ಕೆ.ಪಾಟೀಲ್, ಕಾನೂನು ಸಚಿವ