ಬಿಜೆಪಿಯಿಂದ ಗಾಂಧಿ ಅವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ : ಡಿ.ಕೆ.ಶಿವಕುಮಾರ್ ಆಕ್ರೋಶ
ಬೆಂಗಳೂರು: “ಬಿಜೆಪಿಯವರು ಗಾಂಧಿಯವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅದನ್ನು ಉಳಿಸುವ ಕೆಲಸ ಮಾಡಬೇಕು. ಮಹಾತ್ಮ ಗಾಂಧಿ ಅವರ ತತ್ವಗಳನ್ನು ಒಪ್ಪದ ಬಿಜೆಪಿಯವರು ಅವರ ಪ್ರತಿಮೆ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಹುತಾತ್ಮ ದಿನಾಚರಣೆ ಅಂಗವಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
“ಬಿಜೆಪಿಯವರು ಗಾಂಧಿ ಅವರ ತತ್ವಗಳನ್ನು ಬಾಯಲ್ಲಿ ಹೇಳದೇ ಇರಬಹುದು ಆದರೆ ಆಡಳಿತ ಪಕ್ಷವನ್ನು ವಿರೋಧಿಸಲು ಗಾಂಧಿ ಅವರ ಪ್ರತಿಮೆಯನ್ನೇ ಆಶ್ರಯಿಸಬೇಕು. ಧರಣಿ ಮಾಡಬೇಕು ಎಂದು ಹೇಳಿಕೊಟ್ಟವರೇ ಗಾಂಧಿ. ಗಾಂಧಿ ಅವರ ಮೌನ, ಧ್ಯಾನದ ಹಿಂದೆ ದೊಡ್ಡ ಸಂದೇಶವಿದೆ. ಸ್ವದೇಶಿ ಆಲೋಚನೆ ಹೇಳಿಕೊಟ್ಟವರು ಗಾಂಧಿ. ಪ್ರಧಾನಿ ಅವರು ಇದನ್ನೇ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆ” ಎಂದರು.
“ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ” ಎಂದರು.
ವರ್ಷಪೂರ್ತಿ ಗಾಂಧಿ ಕಾರ್ಯಕ್ರಮ :
“ಗಾಂಧಿ ಅವರ ಸಂದೇಶಗಳನ್ನು ಪ್ರಚಾರ ಮಾಡಲು ರಾಜ್ಯದಾದ್ಯಂತ ವರ್ಷಪೂರ್ತಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು ಎನ್ನುವ ಆಲೋಚನೆ ಸರಕಾರದ ಮುಂದಿದೆ. ಗಾಂಧಿ ಭಾರತ ಕಾರ್ಯಕ್ರಮ ಆಚರಣಾ ಸಮಿತಿ ನೀಡಿರುವ ವರದಿ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್ ವೇಳೆ ತಿಳಿಸಬಹುದು. ಇದರ ಬಗ್ಗೆ ಎಐಸಿಸಿ ಅಧ್ಯಕ್ಷರ ಬಳಿಯೂ ಮನವಿ ಮಾಡಿದ್ದೇನೆ” ಎಂದು ಹೇಳಿದರು.