×
Ad

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ : ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕರೆ

Update: 2025-02-16 15:38 IST

 ಡಿ.ಕೆ.ಶಿವಕುಮಾರ್

ಬೆಂಗಳೂರು: "ಯಾವುದೇ ಕ್ಷಣದಲ್ಲಿ ಸ್ಥಳೀಯ-ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಶಿವರಾಮೇಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ರವಿವಾರ ಮಾತನಾಡಿದರು.

"ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ವಿಚಾರವಾಗಿ ನ್ಯಾಯಾಲಯದಿಂದ ಸಧ್ಯದಲ್ಲೇ ಸೂಚನೆ ಬರುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ನಗರ ಪಾಲಿಕೆ ಚುನಾವಣೆಯನ್ನು ನಡೆಸಬೇಕಾಗಿದ್ದು ಗ್ರೇಟರ್ ಬೆಂಗಳೂರು ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಯಾವುದೇ ಕ್ಷಣದಲ್ಲಿ ಈ ಚುನಾವಣೆಗಳು ಘೋಷಣೆಯಾಗಬಹುದು. ಇದಕ್ಕೆ ನಾವೆಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು" ಎಂದರು.

"ಈ ಚುನಾವಣೆಗಳ ಸಿದ್ಧತೆಗಾಗಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳನ್ನು ಸೇರಿಸಿಕೊಂಡು ವಿಭಾಗವಾರು ಸಮಿತಿ ರಚಿಸಲಿದ್ದೇವೆ. ಈ ಸಮಿತಿ ಮಾರ್ಚ್ ಒಳಗಾಗಿ ರಾಜ್ಯ ಪ್ರವಾಸ ಮಾಡಿ ಎಲ್ಲಾ ಕಡೆ ಸಮನ್ವಯತೆ ಸಾಧಿಸಿ ತಯಾರಿ ಮಾಡಿಕೊಳ್ಳಬೇಕು. ಎಲ್ಲೆಲ್ಲಿ ನಾಯಕರ ಮಧ್ಯೆ ಹೊಂದಾಣಿಕೆ ಸಾಧಿಸಿ, ಶೇ.50 ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡುವ ಬಗ್ಗೆ ವರದಿ ಸಲ್ಲಿಸಬೇಕು" ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಜಾಗ ಇದ್ದರೆ ಮಾತ್ರ ಕಚೇರಿ ಶಂಕುಸ್ಥಾಪನೆ :

"ಇನ್ನು 100 ಕಾಂಗ್ರೆಸ್ ಕಚೇರಿ ನಿರ್ಮಿಸುವ ಹಿನ್ನೆಲೆಯಲ್ಲಿ ಇವುಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇನೆ. ಈ ಕಾರ್ಯಕ್ಕೆ ನಾಲ್ಕು ವಿಭಾಗಗಳಲ್ಲಿ ಸಮಿತಿ ರಚಿಸಲಾಗಿದೆ" ಎಂದು ತಿಳಿಸಿದರು.

"ಕಚೇರಿ ಕಟ್ಟಡ ನಿರ್ಮಾಣ ಮಾಡುವ ಜಾಗ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನೋಂದಣಿ ಆಗದಿದ್ದರೆ ಅಲ್ಲಿ ನಮ್ಮ ನಾಯಕರಿಂದ ಶಂಕುಸ್ಥಾಪನೆ ಮಾಡಿಸುವುದಿಲ್ಲ. ಈ ಕಟ್ಟಡ ನಿರ್ಮಾಣದ ಜಾಗ ವೈಯಕ್ತಿಕ ಹೆಸರು, ಬೇರೆ ಟ್ರಸ್ಟ್ ಹೆಸರಿನಲ್ಲಿ ಇರುವಂತಿಲ್ಲ" ಎಂದರು.

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ:

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿವಿಧ ನಾಯಕರು ಹಂತ ಹಂತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇಂದು ಎಲ್.ಆರ್ ಶಿವರಾಮೇಗೌಡ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇನ್ನು ನಮ್ಮ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ಬ್ರಿಜೇಶ್ ಕಾಳಪ್ಪ ಅವರು ಕೂಡ ಆಪ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.  ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಮನದಟ್ಟು ಮಾಡಿಕೊಂಡು ಇಂದು ನಮ್ಮ ಪಕ್ಷ ಸೇರುತ್ತಿದ್ದಾರೆ. ಈ ಇಬ್ಬರು ನಾಯಕರು ಹಾಗೂ ಅವರ ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಆತ್ಮೀಯವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಎಲ್ಲಾ ನದಿಗಳು ಸಮುದ್ರ ಸೇರುವಂತೆ ಎಲ್ಲಾ ಪಕ್ಷಗಳ ನಾಯಕರು ನಮ್ಮ ಸಿದ್ಧಾಂತ, ನಾಯಕತ್ವ ಒಪ್ಪಿ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News