×
Ad

ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ : ಕೇಂದ್ರಕ್ಕೆ ಡಿ.ಕೆ.ಶಿವಕುಮಾರ್ ಮನವಿ

Update: 2025-02-18 18:33 IST

ಬೆಂಗಳೂರು/ರಾಜಸ್ಥಾನ : ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.

ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ‘2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ’ ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಆದ್ಯತೆ ಮೇರೆಗೆ ಅನುಮತಿ ಕೊಡಿಸಬೇಕು.

ಮೇಕೆದಾಟು ಯೋಜನೆಗೆ ಡಿಪಿಆರ್ ಪರಿಗಣಿಸಿ, ಅನುಮತಿ ನೀಡುವಂತೆ ಸಿಡಬ್ಲ್ಯೂಸಿಗೆ ನಿರ್ದೇಶನ ನೀಡಬೇಕು. ಇದರಿಂದ ತಮಿಳುನಾಡಿಗೆ ಪ್ರತಿ ತಿಂಗಳ ಲೆಕ್ಕಾಚಾರದ ನೀರು ನೀಡಬಹುದು. ಜತೆಗೆ 400 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

2023-24ರ ಕೇಂದ್ರ ಬಜೆಟ್‍ನಲ್ಲಿ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ 5,300ಕೋಟಿ ರೂ.ಅನುದಾನ ಘೋಷಿಸಿದ್ದರೂ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಯೋಜನೆ ಪೂರ್ಣಗೊಳಿಸಲು ಶೀಘ್ರವೇ ಹಣ ಬಿಡುಗಡೆ ಮಾಡಬೇಕು ಎಂದು ಅವರು ವಿನಂತಿಸಿದರು.

2011ರ ಸೆಪ್ಟೆಂಬರ್ 16ರಂದು ನೀಡಿರುವ ತೀರ್ಪಿನಲ್ಲಿ ಕೆಲವು ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯು 2010ರಲ್ಲಿ ನೀಡಿರುವ ತೀರ್ಪಿನ ಅನ್ವಯ ತನಗೆ ಮೀಸಲಾಗಿರುವ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಅವರು ಮನವಿ ಮಾಡಿದರು.

ಜಲಶಕ್ತಿ ಸಚಿವಾಲಯವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಮೇಲೆ ಒತ್ತಡ ಹೇರಿ, ನದಿ ಜೋಡಣೆ ಯೋಜನೆಯಡಿ ಗೋದಾವರಿ-ಕಾವೇರಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಪಾಲನ್ನು ಮರುಪರಿಶೀಲನೆ ಮಾಡಬೇಕು. ಈ ಯೋಜನೆಯಡಿ ಪ್ರಸ್ತುತ ಕರ್ನಾಟಕಕ್ಕೆ ಕೇವಲ 15.891 ಟಿಎಂಸಿ (ಶೇ.10.74) ನೀರನ್ನು ಮಾತ್ರ ಹಂಚಿಕೆ ಮಾಡಲಾಗಿದೆ ಎಂದರು.

ನಮ್ಮ ದೇಶವು ಪ್ರಪಂಚದ ಶೇ.18ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಶೇ.4ರಷ್ಟು ಮಾತ್ರ ಶುದ್ದ ಕುಡಿಯುವ ನೀರಿನ ಮೂಲವನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶವು ಸಾಕಷ್ಟು ಸವಾಲು ಎದುರಿಸಬೇಕಿದೆ. ಕೃಷಿ ಅಗತ್ಯಗಳಿಗೆ, ಬೆಳೆಯುತ್ತಿರುವ ಜನಸಂಖ್ಯೆಗೆ, ನಗರಗಳ ವಿಸ್ತರಣೆಗೆ, ಕೈಗಾರಿಕೆಗಳಿಗೆ ನೀರು ಬೇಡಿಕೆ ಪೂರೈಸಲು ಈಗಿನಿಂದಲೇ ಸನ್ನದ್ಧವಾಗಿರಬೇಕು ಎಂದು ಅವರು ಹೇಳಿದರು.

ದೇಶದಲ್ಲಿ ಈವರೆಗೆ ಸುಮಾರು 253 ಶತಕೋಟಿ ಘನ ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯ ವಿದೆ. ನಮ್ಮ ದೇಶವು ಸುಸ್ಥಿರ ಪ್ರಗತಿ ಸಾಧಿಸಲು ನೀರಿನ ಸಂಪನ್ಮೂಲ ಬಲಪಡಿಸುವ ಅಗತ್ಯವಿದೆ. ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಜಿಡಿಪಿ ಬೆಳವಣಿಗೆ ನಡುವೆ ನೇರ ಸಂಬಂಧವಿದೆ ಎಂದು ಅನೇಕ ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.

ನೀರು ವಿಶಿಷ್ಟ ಸಂಪನ್ಮೂಲ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಮಾನವನ ಮೂಲಭೂತ ಅಗತ್ಯ ಪೂರೈಸಲು, ಪರಿಸರ ಸಮತೋಲನ ಕಾಯ್ದುಕೊಳ್ಳಲು ನೀರು ಮೂಲಾಧಾರ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ನೀರಿನ ಮಾಲಿನ್ಯ ಮತ್ತು ವಿವಿಧ ವಲಯಗಳು ಅಥವಾ ಬಳಕೆದಾರರ ನಡುವಿನ ಸ್ಪರ್ಧೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಶಿವಕುಮಾರ್ ತಿಳಿಸಿದರು.

ಕರ್ನಾಟಕವು ಪರಿಣಾಮಕಾರಿ ನಿರ್ವಹಣೆ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸಾಧಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ನೀರಾವರಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಿಂದ ಅಕ್ರಮವಾಗಿ ನೀರು ಬಳಸಿಕೊಳ್ಳುವುದನ್ನು ತಡೆಯಲು ಕರ್ನಾಟಕ ನೀರಾವರಿ ಕಾಯ್ದೆಗೆ 1965ಕ್ಕೆ, 2024ರ ಆಗಸ್ಟ್‌ ನಲ್ಲಿ ತಿದ್ದುಪಡಿ ಮಾಡಲಾಯಿತು. ಕಾಲುವೆಗಳ ಮೂಲಕ ಅಕ್ರಮವಾಗಿ ನೀರು ಮೇಲೆತ್ತುವುದನ್ನು ತಪ್ಪಿಸಿ, ಕಾಲುವೆ ಕೊನೆ ಭಾಗದ ರೈತರಿಗೆ ನೀರು ಹೋಗುವಂತೆ ಮಾಡಲು ಈ ತಿದ್ದುಪಡಿ ಮಾಡಲಾಗಿದೆ ಎಂದರು.

ನೀರಾವರಿ ವಲಯದ ಪರಿಣಾಮಕಾರಿ ನಿರ್ವಹಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನೂತನ ರಾಜ್ಯ ಜಲನೀತಿಯನ್ನು 2022ರಲ್ಲಿ ಜಾರಿಗೆ ತರಲಾಯಿತು. ಜಲ ಸಂರಕ್ಷಣೆ ಹಾಗೂ ಆರೋಗ್ಯ, ಆಹಾರ, ಇಂಧನ, ಪರಿಸರ ಉದ್ದೇಶಕ್ಕೆ ನೀರಿನ ಮೂಲಗಳ ಸಮರ್ಪಕ ಬಳಕೆಗೆ ಒತ್ತು ನೀಡಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅವುಗಳೆಂದರೆ, ಪ್ರಸ್ತುತ ಜಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 29 ವಿವಿಧ ಶಾಸನಗಳಿದ್ದು, ಆ ಪೈಕಿ 14 ಕೇಂದ್ರ ಸರಕಾರ ಹಾಗೂ 15 ರಾಜ್ಯ ಸರಕಾರಗಳ ಕಾಯ್ದೆಗಳಾಗಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News