×
Ad

ಮುಡಾ ಪ್ರಕರಣ | ಬಿಜೆಪಿ-ಜೆಡಿಎಸ್‌ನ ರಾಜಕೀಯ ಕುತಂತ್ರ : ಡಿ.ಕೆ.ಶಿವಕುಮಾರ್

Update: 2025-02-20 13:13 IST

ಡಿ.ಕೆ.ಶಿವಕುಮಾರ್

ಬೆಂಗಳೂರು : “ಮುಡಾ ಪ್ರಕರಣ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ, ಇದು ಹೆಚ್ಚಿನ ದಿನ ನಡೆಯುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಸದಾಶಿವನಗರ ತಮ್ಮ ನಿವಾಸದ ಬಳಿ ಪ್ರತಿಕ್ರಿಯಿಸಿದ ಅವರು, “ಈ ಪ್ರಕರಣದ ಪ್ರಾರಂಭದಲ್ಲೇ ನಾನು ಹೇಳಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದಾಗಲೇ, ನಾನು ಏನು ಹೇಳಬೇಕೋ ಹೇಳಿದ್ದೆ. ಇದು ರಾಜಕೀಯ ಪ್ರೇರಿತ ಆರೋಪ. ಯಾವ ದಾಖಲೆಯಲ್ಲೂ ಸಿದ್ದರಾಮಯ್ಯ ಅವರ ಸಹಿ ಇಲ್ಲದಿರುವಾಗ, ಸಂಬಂಧವೇ ಇಲ್ಲದಿರುವಾಗ ಅವರ ಪಾತ್ರ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.

ಆಸ್ತಿ ಕಳೆದುಕೊಂಡವರು ಪರಿಹಾರ ಕೇಳುವುದು ಸಹಜ. ನಾವು ನೀವು ಕೂಡ ಕೇಳುತ್ತೇವೆ. ಅವರು ಕೊಟ್ಟಿದ್ದಾರೆ. ನಮಗೆ ಇಂತಹದೇ ಜಾಗದಲ್ಲಿ ನಿವೇಶನ ನೀಡಿ ಎಂದು ಅವರು ಎಲ್ಲಿಯೂ ಕೇಳಿಲ್ಲ. ಆದರೂ ಅನಗತ್ಯ ಗೊಂದಲ ಬೇಡ ಎಂದು ಅವರು ಈ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಯಾವುದೇ ಪ್ರಕರಣ ದಾಖಲಿಸುವಾಗ ಅದಕ್ಕೆ ಪೂರಕವಾದ ದಾಖಲೆ ಬೇಕು. ಲೋಕಾಯುಕ್ತ ಸಂಸ್ಥೆ ತನ್ನ ಕರ್ತವ್ಯ ಮಾಡಿದೆ. ಬಿಜೆಪಿಯವರು ತಮ್ಮ ಹೋರಾಟ ಮಾಡಿಕೊಳ್ಳಲಿ. ದೆಹಲಿಯಿಂದ ವಕೀಲರನ್ನು ಕರೆಸಿ ವಾದ ಮಂಡಿಸಲು ನಮಗೆ ಗೊತ್ತಿಲ್ಲವೇ? ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕುತಂತ್ರ. ಇದು ಹೆಚ್ಚು ದಿನ ನಡೆಯುವುದಿಲ್ಲ” ಎಂದು ತಿಳಿಸಿದರು.

ಲೋಕಾಯುಕ್ತ ಸಂಸ್ಥೆ ಸರ್ಕಾರದ ತಾಳಕ್ಕೆ ಕುಣಿದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಸುಪ್ರೀಂ ಕೋರ್ಟ್ ತೀರ್ಪು ಏನಿದೆ ಗೊತ್ತಿದೆಯೇ? ಸ್ಥಳೀಯ ಮಟ್ಟದ ಯಾವುದೇ ಸಂಸ್ಥೆಗಳನ್ನು ದುರ್ಬಲಗೊಳಿಸಬಾರದು ಎಂಬ ನಿರ್ದೇಶನವಿದೆ. ಇನ್ನು ಹೈಕೋರ್ಟ್ ಕೂಡ ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಎಂದು ಹೇಳಿದೆ. ಅವರವರು ಅವರ ಕೆಲಸ ಮಾಡುತ್ತಿದ್ದಾರೆ. ಯಾರೇ ಸಿಎಂ ಆಗಿರಲಿ, ಬೊಮ್ಮಾಯಿ ಸಿಎಂ ಆಗಿರಲಿ, ಮುಖ್ಯಮಂತ್ರಿ ಹೇಳಿದಂತೆ ಲೋಕಾಯುಕ್ತ ಪೊಲೀಸರು ಕೇಳುತ್ತಾರಾ? ಇಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವಿಲ್ಲ. ಇಲ್ಲಿ ಯಾವುದೇ ಅಧಿಕಾರಿ ನೇಮಿಸಬೇಕಾದರೂ ಲೋಕಾಯುಕ್ತರ ಅನುಮತಿ ಮೇರೆಗೆ ಕೆಲಸ ಮಾಡಲಾಗುವುದು. ಇಲ್ಲಿ ಕರ್ನಾಟಕದ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದೇ ಹೊರತು, ಹೊರ ರಾಜ್ಯದವರನ್ನು ಆಯ್ಕೆ ಮಾಡಲು ಬರುವುದಿಲ್ಲ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News