×
Ad

ಲೋಕಭವನಕ್ಕೆ ತೆರಳಿದ ಡಿಕೆಶಿ: ಸರಕಾರ ರಚನೆಗೆ ಹಕ್ಕು ಮಂಡನೆ

Update: 2026-05-30 18:50 IST

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದು, ನೂತನ ಸರಕಾರ ರಚನೆಗೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರ ಮುಂದೆ ಹಕ್ಕು ಮಂಡನೆ ಮಾಡಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಸೂಚಿಸಿದರು. ಡಾ.ಜಿ.ಪರಮೇಶ್ವರ್ ಅನುಮೋದಿಸಿದರು. ಎಲ್ಲ ಶಾಸಕರು ಕೈ ಎತ್ತುವ ಮೂಲಕ ನಿರ್ಣಯವನ್ನು ಬೆಂಬಲಿಸಿದರು.

ಆನಂತರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿದರು.

ಇದಕ್ಕೂ ಮೊದಲು ಸಭೆಯ ಆರಂಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಕಟಿಸಿ, ಚಾಲನೆ ನೀಡಿದರು.

ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯವನ್ನು ಸಿದ್ದರಾಮಯ್ಯ ಅವರು ಮಂಡಿಸಿದರು. ಡಾ.ಜಿ.ಪರಮೇಶ್ವರ್ ಅವರು ಅನುಮೋದಿಸಿದರು. ಎಲ್ಲ ಶಾಸಕರು ಕೈ ಎತ್ತುವ ಮೂಲಕ ಇದನ್ನು ಬೆಂಬಲಿಸಿದರು. ಆನಂತರ ಸಭೆಗೆ 10 ನಿಮಿಷಗಳ ವಿರಾಮ ನೀಡಿರುವುದಾಗಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.

ಬಳಿಕ ಸಿದ್ದರಾಮಯ್ಯ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಮುಖ್ಯಮಂತ್ರಿ ಕೊಠಡಿಗೆ ತೆರಳಿದರು. ಆನಂತರ ಪುನಃ ಸಮ್ಮೇಳನ ಸಭಾಂಗಣಕ್ಕೆ ಮೂವರು ನಾಯಕರು ವಾಪಸ್ ಬಂದ ನಂತರ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

ಸಿದ್ದರಾಮಯ್ಯ ಅಧಿಕಾರಾವಧಿಗೆ ಶ್ಲಾಘನೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ನಂತರ ಡಿ.ಕೆ.ಶಿವಕುಮಾರ್ ಅವರು, ನಿರ್ಗಮಿತ ನಾಯಕ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಅವಧಿಯ ಸೇವೆಯನ್ನು ಶ್ಲಾಘಿಸುವ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಎಲ್ಲ ಶಾಸಕರು ಈ ನಿರ್ಣಯವನ್ನು ಒಕ್ಕೊರಲಿನಿಂದ ಬೆಂಬಲಿಸಿದರು.

ಕರ್ನಾಟಕದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ವಿಶಿಷ್ಟ ಸೇವೆಯನ್ನು ಸ್ಮರಿಸಿ, ಕಾಂಗ್ರೆಸ್ ಶಾಸಕಾಂಗ ಪಕ್ಷವು ಸಿದ್ದರಾಮಯ್ಯ ಅವರಿಗೆ ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ. 2013-2018 ಮತ್ತು 2023-2026ರ ವರೆಗೆ ಮುಖ್ಯಮಂತ್ರಿಯಾಗಿ ಹಾಗೂ ಪ್ರತಿಪಕ್ಷದ ನಾಯಕರಾಗಿ ಸಲ್ಲಿಸಿದ ಸೇವೆಯನ್ನು ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಯಾವಾಗಲೂ ಅಪಾರ ಪ್ರೀತಿ ಹಾಗೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ಸಾಮಾಜಿಕ ನ್ಯಾಯದ ಮೇಲಿನ ಅವರ ಸಮರ್ಪಣಾ ಭಾವ, ಆಡಳಿತಾತ್ಮಕ ಸಾಮರ್ಥ್ಯ, ಪಕ್ಷದ ಸಿದ್ಧಾಂತಕ್ಕೆ ಅವರ ಬದ್ಧತೆ ಮತ್ತು ಪಕ್ಷದ ನಾಯಕತ್ವದಲ್ಲಿನ ಅವರ ಸಂಪೂರ್ಣ ನಂಬಿಕೆಯು ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಅನುಕರಿಸಬೇಕಾದ ಮಾದರಿಯಾಗಿದೆ.

ಕಾಂಗ್ರೆಸ್ ಪಕ್ಷ ಮತ್ತು ಸರಕಾರವು ಯಾವಾಗಲೂ ಇದೇ ಆದರ್ಶಗಳ ಹಾದಿಯಲ್ಲಿ ಮುನ್ನಡೆಯುತ್ತದೆ. ನಾವು ಅವರಿಗೆ ನಮ್ಮ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರ್ನಾಟಕದ ಜನತೆಯ ಸೇವೆ ಮಾಡಲು, ಪ್ರತಿಯೊಂದು ವಲಯದಲ್ಲೂ ಪರಿವರ್ತನಾತ್ಮಕ ಅಭಿವೃದ್ಧಿಯನ್ನು ತರಲು ಮತ್ತು ಕನ್ನಡಿಗರ ಜೀವನದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಈ ಪಯಣದಲ್ಲಿ ಅವರ ನಿರಂತರ ಪಾಲ್ಗೊಳ್ಳುವಿಕೆ ಮತ್ತು ಮಾರ್ಗದರ್ಶನವನ್ನು ನಾವು ಸದಾ ಬಯಸುತ್ತೇವೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಸಭಾ ಸದಸ್ಯರಾದ ಜೈರಾಂ ರಮೇಶ್, ಡಾ.ಸೈಯದ್ ನಾಸಿರ್ ಹುಸೇನ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ತ್ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

 

ಸರಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ: ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಡಿ.ಕೆ.ಶಿವಕುಮಾರ್ ವಿಧಾನಸೌಧದಿಂದ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಶಾಸಕರ ಸಹಿಯುಳ್ಳ ಪತ್ರ ನೀಡಿ ನೂತನ ಸರಕಾರ ರಚನೆಗೆ ಹಕ್ಕು ಮಂಡಿಸಿದರು. ದಾಖಲೆಯನ್ನು ಪರಿಶೀಲಿಸಿದ ರಾಜ್ಯಪಾಲ ಸರಕಾರ ರಚನೆಗೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ಶಾಸಕರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News