14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ : ರಾಜ್ಯದಲ್ಲಿ ಶೇ.69.23ರಷ್ಟು ಮತದಾನ

Update: 2024-04-26 17:37 GMT

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23 ರಷ್ಟು ಮತದಾನ ಆಗಿದೆ. ಈ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.81.48ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.52.81ರಷ್ಟು ಮತದಾನವಾಗಿದೆ.

ಬೇಸಿಗೆಯ ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೆ ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂದಾದರು. ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯ ವ್ಯಕ್ತಿಗಳು ತಮ್ಮ-ತಮ್ಮ ಮತಗಟ್ಟೆಗಳಲ್ಲಿ ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು.

ರಾಜಧಾನಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಿಗಿಂತ ಗ್ರಾಮೀಣ ಭಾಗದ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಹುತೇಕ ಕಡೆ ಸಂಜೆ 6 ಗಂಟೆಯ ಸಮಯದಲ್ಲಿಯೂ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿದ್ದರು. ಕೇಂದ್ರ ಚುನಾವಣಾ ಆಯೋಗವು 14 ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಿತ್ತು.

ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ: 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಬಿಗಿ ಬಂದೋಬಸ್ತ್ ಮೂಲಕ ಮತಯಂತ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸ್ಟ್ರಾಂಗ್ ರೂಂಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದ ಇನ್ನುಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದ್ದು, ಜೂ.4ರಂದು ಮತಗಳ ಎಣಿಕೆ ನಡೆದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು: ಉಡುಪಿ-ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆ(ಕಾಂಗ್ರೆಸ್), ಕೋಟ ಶ್ರೀನಿವಾಸ ಪೂಜಾರಿ(ಬಿಜೆಪಿ), ಕೆ.ಟಿ.ರಾಧಾಕೃಷ್ಣ(ಬಿಎಸ್‍ಪಿ). ಹಾಸನ: ಗಂಗಾಧರ್ ಬಹುಜನ್(ಬಿಎಸ್ಪಿ), ಪ್ರಜ್ವಲ್ ರೇವಣ್ಣ(ಬಿಜೆಪಿ), ಶ್ರೇಯಸ್ ಎಂ.ಪಟೇಲ್(ಕಾಂಗ್ರೆಸ್). ದಕ್ಷಿಣ ಕನ್ನಡ: ಕಾಂತಪ್ಪ ಅಲಂಗಾರ್(ಬಿಎಸ್‍ಪಿ), ಪದ್ಮರಾಜ್ ಆರ್.ಪೂಜಾರಿ(ಕಾಂಗ್ರೆಸ್), ಕ್ಯಾಪ್ಟನ್ ಬ್ರಿಜೇಶ್ ಚೌಟ(ಬಿಜೆಪಿ).

ಚಿತ್ರದುರ್ಗ: ಅಶೋಕ ಚಕ್ರವರ್ತಿ(ಬಿಎಸ್ಪಿ), ಗೋವಿಂದ ಕಾರಜೋಳ(ಬಿಜೆಪಿ), ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್). ತುಮಕೂರು: ಎಸ್.ಪಿ.ಮುದ್ದಹನುಮೇಗೌಡ(ಕಾಂಗ್ರೆಸ್), ರಾಜಸಿಂಹ ಜೆ.ಎನ್.(ಬಿಎಸ್‍ಪಿ), ವಿ.ಸೋಮಣ್ಣ(ಬಿಜೆಪಿ). ಮಂಡ್ಯ: ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್), ವೆಂಕಟರಮಣೇಗೌಡ ಯಾನೆ ಸ್ಟಾರ್ ಚಂದ್ರು(ಕಾಂಗ್ರೆಸ್), ಶಿವಶಂಕರ ಎಸ್.(ಬಿಎಸ್‍ಪಿ).

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(ಬಿಜೆಪಿ), ಎಂ.ಲಕ್ಷ್ಮಣ್(ಕಾಂಗ್ರೆಸ್). ಚಾಮರಾಜನಗರ: ಎಂ.ಕೃಷ್ಣಮೂರ್ತಿ(ಬಿಎಸ್‍ಪಿ), ಬಾಲರಾಜ್ ಎಸ್.(ಬಿಜೆಪಿ), ಸುನೀಲ್ ಬೋಸ್(ಕಾಂಗ್ರೆಸ್). ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್.ಮಂಜುನಾಥ್(ಬಿಜೆಪಿ), ಡಿ.ಕೆ.ಸುರೇಶ್(ಕಾಂಗ್ರೆಸ್). ಬೆಂಗಳೂರು ಉತ್ತರ: ಗೋವಿಂದಯ್ಯ(ಬಿಎಸ್‍ಪಿ) ಪ್ರೊ.ಎಂ.ವಿ.ರಾಜೀವ್‍ಗೌಡ(ಕಾಂಗ್ರೆಸ್), ಶೋಭಾ ಕರಂದ್ಲಾಜೆ(ಬಿಜೆಪಿ).

ಬೆಂಗಳೂರು ಕೇಂದ್ರ: ಮನ್ಸೂರ್ ಅಲಿ ಖಾನ್(ಕಾಂಗ್ರೆಸ್), ಪಿ.ಸಿ.ಮೋಹನ್(ಬಿಜೆಪಿ) ಹಾಗೂ ಸತೀಶ್ ಚಂದ್ರ ಎಂ.(ಬಿಎಸ್‍ಪಿ). ಬೆಂಗಳೂರು ದಕ್ಷಿಣ: ಅರುಣ್ ಪ್ರಸಾದ್ ಎ.(ಬಿಎಸ್‍ಪಿ), ತೇಜಸ್ವಿ ಸೂರ್ಯ(ಬಿಜೆಪಿ), ಸೌಮ್ಯಾ ರೆಡ್ಡಿ(ಕಾಂಗ್ರೆಸ್), ವಾಟಾಳ್ ನಾಗರಾಜ್(ಕನ್ನಡ ಚಳವಳಿ ಪಕ್ಷ). ಚಿಕ್ಕಬಳ್ಳಾಪುರ: ಮಹಾದೇವ್ ಪಿ.(ಬಿಎಸ್‍ಪಿ), ಮುನಿವೆಂಕಟಪ್ಪ ಎಂ.ಪಿ.(ಸಿಪಿಎಂ), ಎಂ.ಎಸ್.ರಕ್ಷಾ ರಾಮಯ್ಯ(ಕಾಂಗ್ರೆಸ್), ಡಾ.ಕೆ.ಸುಧಾಕರ್(ಬಿಜೆಪಿ). ಕೋಲಾರ: ಕೆ.ವಿ.ಗೌತಮ್(ಕಾಂಗ್ರೆಸ್), ಎಂ.ಮಲ್ಲೇಶ್ ಬಾಬು(ಜೆಡಿಎಸ್), ಎಸ್.ಬಿ.ಸುರೇಶ್(ಬಿಎಸ್‍ಪಿ) ಸೇರಿದಂತೆ 247 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರ ಸೇರಿದೆ.

ಶೇಕಡವಾರು ಮತದಾನ: ಮಂಡ್ಯ-ಶೇ81.48, ಕೋಲಾರ-ಶೇ.78.07, ಉಡುಪಿ ಚಿಕ್ಕಮಗಳೂರು-ಶೇ76.06, ದಕ್ಷಿಣ ಕನ್ನಡ-ಶೇ.77.43, ಹಾಸನ-ಶೇ77.51, ತುಮಕೂರು-ಶೇ.77.70, ಚಿಕ್ಕಬಳ್ಳಾಪುರ-ಶೇ.76.82, ಚಾಮರಾಜನಗರ-ಶೇ.76.59 ಚಿತ್ರದುರ್ಗ-ಶೇ.73.11, ಮೈಸೂರು-ಶೇ70.45, ಬೆಂಗಳೂರು ಗ್ರಾಮಾಂತರ-ಶೇ.67.29, ಬೆಂಗಳೂರು ಉತ್ತರ-ಶೇ.54.42, ಬೆಂಗಳೂರು ಕೇಂದ್ರ-ಶೇ.52.81 ಹಾಗೂ ಬೆಂಗಳೂರು ದಕ್ಷಿಣ-ಶೇ.53.15ರಷ್ಟು ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News