ಬೆಂಗಳೂರು : 2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ 'ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ' ವೇದಿಕೆಯ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ದಲಿತ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯ ಭರವಸೆಗಳಾದ ಮತಾಂತರ ನಿಷೇಧ ಕಾಯ್ದೆ ರದ್ದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್, ಮುಸ್ಲಿಮರ 2ಬಿ ಮೀಸಲಾತಿ ಮರುಸ್ಥಾಪನೆ ಹಾಗೂ ದ್ವೇಷ ಭಾಷಣ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕೆಂಬ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಮಾವೇಶದಲ್ಲಿ ಐದು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬೆಳಗಾವಿಯಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಅಧಿವೇಶನದಲ್ಲೇ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ಸಂಘಟನೆಗಳು ಸರಕಾರಕ್ಕೆ ನೀಡಿವೆ.

ಸಮಾವೇಶದ ಆರಂಭದಲ್ಲಿ ಫಾದರ್ ವಿನಯ್ ಕುಮಾರ್ ಸ್ವಾಗತಿಸಿದರೆ, ಫಾದರ್ ಅರುಣ್ ಲೂಯಿಸ್ ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ, ಇದೊಂದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ, ಬದಲಾಗಿ ಸಾಮಾಜಿಕವಾಗಿ ಶೋಷಿತರಾದ ಜನರ ಸಮಾವೇಶ ಎಂದರು. ಕಪ್ಪು ಬಾವುಟ ಹಿಡಿದು ಪ್ರತಿಭಟಿಸಲು ನಾವಿಲ್ಲಿ ಬಂದಿಲ್ಲ, ಕಣ್ಣಿನ ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಕಪ್ಪು ಕನ್ನಡಕ ಧರಿಸಿದ್ದೇನೆ ಎಂದು ಸ್ಪಷ್ಟಪಡಿಸುತ್ತಲೇ, ಸಂಕಷ್ಟ ಎದುರಾದಾಗ ಅಲ್ಪಸಂಖ್ಯಾತರು ಒಗ್ಗೂಡುತ್ತಾರೆ ಎಂದರು. ಹಿಂದಿನ ಸರಕಾರ ತಂದ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುತ್ತದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಾಯ್ದೆಗಳಿರುವಾಗ ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲ. ನಾವು ಈ ದೇಶದ ಎರಡನೇ ದರ್ಜೆಯ ಪ್ರಜೆಗಳಲ್ಲ, ಶಾಲೆಗಳು ಹಾಗೂ ಸೇಂಟ್ ಜಾನ್ಸ್‌ನಂತಹ ಆಸ್ಪತ್ರೆಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುತ್ತಿದ್ದೇವೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಜನರು ನಿಮ್ಮನ್ನು ನಂಬುತ್ತಾರೆ ಎಂದು ಸರಕಾರಕ್ಕೆ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ, ಪಂಚ ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ ಸರಕಾರ, ಅಲ್ಪಸಂಖ್ಯಾತರು, ದಲಿತರು ಮತ್ತು ರೈತರಿಗೆ ನೀಡಿದ ಭರವಸೆಗಳ ವಿಚಾರದಲ್ಲಿ ಅಪ್ರಾಮಾಣಿಕತೆ ತೋರುತ್ತಿದೆ ಎಂದು ಆರೋಪಿಸಿದರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಭಾಷಣ ಮಾಡುವುದಷ್ಟೇ ಮುಖ್ಯವಲ್ಲ, ಸಿಕ್ಕ ಅಧಿಕಾರವನ್ನು ಬಳಸಿ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಆಡಳಿತ ನಡೆಸಬೇಕು. ನಮ್ಮನ್ನು 'ಟೇಕನ್ ಫಾರ್ ಗ್ರಾಂಟೆಡ್' ಎಂದು ಭಾವಿಸಿದರೆ ಕ್ಷಮಿಸುವುದಿಲ್ಲ, ಮುಂದಿನ ದಾರಿಯ ಬಗ್ಗೆ ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಮೀಯತ್ ಉಲಮಾ-ಎ-ಹಿಂದ್ ರಾಜ್ಯ ಉಪಾಧ್ಯಕ್ಷ ಮುಫ್ತಿ ಆರ್. ಮುಹಮ್ಮದ್ ಹುಸೇನ್ ಸಾಬ್ ಮಾತನಾಡಿ, ಒಳ್ಳೆಯ ಮನುಷ್ಯರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ, ಆದರೆ ಕಾಂಗ್ರೆಸ್ ಸರಕಾರ ನಮಗೆ ನ್ಯಾಯ ಕೊಡುತ್ತಿಲ್ಲ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ನೀಡಿದ ತ್ಯಾಗವನ್ನು ಸ್ಮರಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ, ಭರವಸೆಗಳನ್ನು ಈಡೇರಿಸಿ ಎಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತವು ವಿಶ್ವಾಸದ್ರೋಹದ ಕಥೆಯಾಗಿದೆ ಎಂದು ಟೀಕಿಸಿದರು. ಸ್ಥಳೀಯ ಸಂಸ್ಥೆಗಳು ಹಾಗೂ ಜಿಬಿಎ ಚುನಾವಣೆಗಳಿಗೆ ಎಸ್‌ಐಆರ್ ಪೂರ್ವ ಮತದಾರರ ಪಟ್ಟಿ ಬಳಸುವುದಾಗಿ ಭರವಸೆ ನೀಡಿದ್ದ ಸರಕಾರ, ಈಗ ಎಸ್‌ಐಆರ್ ಪಟ್ಟಿಯನ್ನೇ ಬಳಸಲು ಮುಂದಾಗಿದೆ. ಇದರಿಂದ ರಾಜ್ಯದ ಒಂದು ಕೋಟಿ ಹಾಗೂ ಬೆಂಗಳೂರಿನ 53 ಲಕ್ಷ ಮತದಾರರು ಹಕ್ಕುಗಳಿಂದ ವಂಚಿತರಾಗಲಿದ್ದು, ಇದರಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು, ಆದಿವಾಸಿಗಳು, ವಲಸೆ ಕಾರ್ಮಿಕರು ಮತ್ತು ತೃತೀಯಲಿಂಗಿಗಳು ಸೇರಿದ್ದಾರೆ ಎಂದರು. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ 1,950 ಪ್ರಕರಣಗಳು ದಾಖಲಾಗಿವೆ. ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ಷೇಪಿಸಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಕೆ. ನೀಲಾ ಮಾತನಾಡಿ, ರಾಮಮಂದಿರದ ಬೀಗ ತೆಗೆದವರು ಯಾರು ಎಂಬುದು ಜನರಿಗೆ ಮರೆತಿಲ್ಲ, 'ಮೊಹಬ್ಬತ್ ಕಿ ದುಕಾನ್' ತೆರೆಯುವುದು ಕೇವಲ ಮಾತಿನಿಂದ ಸಾಧ್ಯವಿಲ್ಲ, ಅದಕ್ಕೆ ದೃಢ ನಿಲುವು ಬೇಕು ಎಂದರು. ಸಾಚಾರ್ ವರದಿ ಬಂದು 19 ವರ್ಷ ಕಳೆದರೂ ಮುಸ್ಲಿಮರ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಕಾರ್ಪೊರೇಟ್ ಶಕ್ತಿಗಳ ಜೊತೆಗಿನ ಸ್ನೇಹಕ್ಕಾಗಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತಿಲ್ಲ, ಮೈಸೂರಿನ ಪೊಲೀಸ್ ಠಾಣೆಗೆ ನುಗ್ಗಿದ ಮಾಜಿ ಸಂಸದರ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡುವ ಮೂಲಕ ಒಳಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳದವರನ್ನು ವಚನಭ್ರಷ್ಟರು ಎನ್ನಬೇಕಾಗುತ್ತದೆ ಎಂದರು. ಬುದ್ಧನ ಕಥೆಯನ್ನು ಉಲ್ಲೇಖಿಸಿದ ಅವರು, ದೊಣ್ಣೆಯಿಂದ ಹೊಡೆಯುವವರ ಮುಂದೆ ಹಾವು ಕನಿಷ್ಠ ಬುಸುಗುಟ್ಟದಿದ್ದರೆ ಉಳಿಗಾಲವಿಲ್ಲ ಎಂದರು. 1935ರಲ್ಲಿ ಅಂಬೇಡ್ಕರ್ ಅವರು ಹೇಳಿದಂತೆ ಮತಾಂತರ ಎಂಬುದು ಮನುಷ್ಯನ ಘನತೆ ಮತ್ತು ಆಯ್ಕೆಯ ಪ್ರಶ್ನೆ.  ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 800 ದಲಿತರ ಕೊಲೆಯಾಗಿದ್ದು, ಈ ಬಗ್ಗೆಯೂ ಧ್ವನಿ ಎತ್ತಬೇಕಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ವೀರಸಂಗಯ್ಯ ಮಾತನಾಡಿ, ರಾಜ್ಯದ 87 ಲಕ್ಷ ರೈತ ಕುಟುಂಬಗಳ ಪೈಕಿ 69 ಲಕ್ಷ ಸಣ್ಣ ರೈತರು ಹೈನುಗಾರಿಕೆಯನ್ನೇ ನಂಬಿದ್ದಾರೆ. ಹಾಲು ನಿಲ್ಲಿಸಿದ ರಾಸುಗಳನ್ನು ಮಾರಾಟ ಮಾಡಿದರೆ 20ರಿಂದ 25 ಸಾವಿರ ರೂಪಾಯಿ ಸಿಗುತ್ತಿತ್ತು, ಈಗ ಕಾಯ್ದೆಯಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ಕಾರ್ಪೊರೇಟ್ ಡೈರಿಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಮಾಂಸ ಮತ್ತು ಚರ್ಮೋದ್ಯಮವನ್ನು ನಾಶಪಡಿಸಲು ಈ ಕಾಯ್ದೆ ತರಲಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ರದ್ದುಗೊಳಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕ್ಲಿಫ್ಟನ್ ರೊಝಾರಿಯೊ ಮಾತನಾಡಿ, ಅಲ್ಪಸಂಖ್ಯಾತರು ಎಲ್ಲಿ ಹೋಗುತ್ತಾರೆ ಎಂಬ ಅಹಂಕಾರದಿಂದ ಕಾಂಗ್ರೆಸ್ ಹೊರಬರಬೇಕು ಎಂದರು. ಮೇ 22ರಂದು ಕೂಲಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಆದೇಶ ಹೊರಡಿಸಿದ್ದ ಸರಕಾರ, ಅದನ್ನು ಇನ್ನೂ ಜಾರಿಗೊಳಿಸಿಲ್ಲ. ಹಳ್ಳಿಗಳಲ್ಲಿ ದಲಿತರ ಮೇಲೆ ಅಸ್ಪೃಶ್ಯತೆ ಮತ್ತು ಸಾಮಾಜಿಕ ಬಹಿಷ್ಕಾರ ಮುಂದುವರಿದಿದೆ ಎಂದರು. ಜನಶಕ್ತಿ ಸಂಚಾಲಕಿ ಮಲ್ಲಿಗೆ ಮಾತನಾಡಿ, ಮಲಗಿದವರನ್ನು ಎಬ್ಬಿಸಬಹುದು, ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಸರಕಾರ ಭರವಸೆಗಳನ್ನು ಮರೆತಿಲ್ಲ, ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದೆ. ದ್ವೇಷ ಭಾಷಣದಿಂದ ಉಂಟಾಗುವ ಗಲಭೆಗಳಿಗೆ ಬಡವರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಮಿಲ್ಲರ್ ಆಯೋಗದಿಂದ ಹಿಡಿದು ಚಿನ್ನಪ್ಪ ರೆಡ್ಡಿ ಆಯೋಗದವರೆಗೆ ಹಿಂದುಳಿದ ವರ್ಗಗಳ ಅಧ್ಯಯನದ ಆಧಾರದ ಮೇಲೆ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗಿತ್ತು. ಇದು ಧರ್ಮಾಧಾರಿತ ಮೀಸಲಾತಿಯಲ್ಲ. 2023ರ ಏಪ್ರಿಲ್ 24ರಂದು ಬೊಮ್ಮಾಯಿ ಸರಕಾರ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸಲು ರಾಜ್ಯ ಸಚಿವ ಸಂಪುಟ ಸಭೆ ಕರೆದು ಹಿಂದಿನ ಸರಕಾರದ ಆದೇಶವನ್ನು ಹಿಂಪಡೆಯುವ ನಿರ್ಣಯ ಕೈಗೊಂಡರೆ ಸಾಕು, ಆದರೆ ಸರಕಾರ ಯಾರದೋ ಒತ್ತಡಕ್ಕೆ ಹೆದರುತ್ತಿದೆ ಎಂದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿ ಸರಕಾರವನ್ನು ಸರಿದಾರಿಗೆ ತರಬೇಕು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಆನೇಕಲ್‌ನಲ್ಲಿ ಮಾಂಸ, ಮೀನು ಮಾರಾಟ ನಿಷೇಧಿಸಿರುವುದು ಖಂಡನೀಯ ಎಂದರು.

ದಲಿತ ಮುಖಂಡರಾದ ಬಸವರಾಜ ಕೌತಾಳ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಇಂದೇ ಈ ಹಕ್ಕೊತ್ತಾಯಗಳ ಬಗ್ಗೆ ಸರಕಾರದ ನಿಲುವು ಪ್ರಕಟಿಸಬೇಕು ಎಂದರು.

ಸಮಾವೇಶದ ಅಂತ್ಯದಲ್ಲಿ ಕೆ.ಆರ್. ಸುಹೈಲ್ ಅಹ್ಮದ್ ನಿರ್ಣಯಗಳನ್ನು ಮಂಡಿಸಿದರು. ದೆಹಲಿಯಲ್ಲಿ ರಾಹುಲ್ ಗಾಂಧಿ ಸಂವಿಧಾನ ಉಳಿವಿಗಾಗಿ ಹೋರಾಡುತ್ತಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರೇ ಬೀದಿಗಿಳಿಯುವಂತಾಗಿದೆ. ಯಾವುದೇ ಫಿಕ್ಸೆಡ್ ಡೆಪಾಸಿಟ್ ಅನ್ನು ಐದು ವರ್ಷಗಳಲ್ಲಿ ಹಿಂಪಡೆಯಬಹುದು ಎಂಬುದನ್ನು ಕಾಂಗ್ರೆಸ್ ಮರೆಯಬಾರದು ಎಂದರು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ  ಮತಾಂತರ ನಿಷೇಧ ಕಾಯ್ದೆಗೆ 2022ರಲ್ಲಿ ಬಿಜೆಪಿ ಸರಕಾರ ತಂದಿರುವ ತಿದ್ದುಪಡಿಯನ್ನು ಕಾಂಗ್ರೆಸ್ ಸರಕಾರ ರದ್ದುಗೊಳಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸುತ್ತಲೇ, ಕಾದು ನೋಡುವ ತಂತ್ರದೊಂದಿಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ-2022 ರದ್ದುಗೊಳಿಸಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020 ರದ್ದುಗೊಳಿಸಿ ಗುಂಪು ಹಲ್ಲೆ ತಡೆಗೆ ತೆಹಸೀನ್ ಪೂನಾವಾಲಾ ತೀರ್ಪು ಜಾರಿಗೊಳಿಸುವುದು, ಅರ್ಹ ಮುಸ್ಲಿಮರಿಗೆ 2ಬಿ ಮೀಸಲಾತಿ ಮರುಸ್ಥಾಪಿಸಿ ಕ್ರೈಸ್ತ ಸಮುದಾಯಕ್ಕೆ ಒಬಿಸಿ ಪಟ್ಟಿಯಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವುದು ಹಾಗೂ ಮುಖ್ಯಮಂತ್ರಿಗಳು ಕಾಲಮಿತಿ ನಿಗದಿಪಡಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂಬ ಐದು ನಿರ್ಣಯಗಳನ್ನು ಸಭೆ ಅಂಗೀಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor