ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಲಿ : ಗೋವಿಂದ ಕಾರಜೋಳ ಆಗ್ರಹ
"ಕೋಗಿಲು ಘಟನೆಯಲ್ಲಿ ಅಕ್ರಮ ಮನೆ ಕಟ್ಟಿಕೊಂಡವರಿಗೆ ಮನೆ ನೀಡಲು ಮುಂದಾದ ಕ್ರಮ ಖಂಡನೀಯ"
ಗೋವಿಂದ ಕಾರಜೋಳ
ಬೆಂಗಳೂರು : ರಾಜ್ಯಾದ್ಯಂತ ಜನರು ಬಂಡೇಳುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಬೇಕು, ಇಲ್ಲವೇ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ನಿರಂತರವಾಗಿ ದುರಾಡಳಿತದಲ್ಲಿ ತೊಡಗಿದೆ. ಕೋಗಿಲು ಘಟನೆಯಲ್ಲಿ ಅಕ್ರಮ ಮನೆ ಕಟ್ಟಿಕೊಂಡವರಿಗೆ ಮನೆ ನೀಡಲು ಮುಂದಾದ ಕ್ರಮ ಖಂಡನೀಯ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಮನೆ ನಿರ್ಮಿಸಿ ವಾಸವಿದ್ದ ದಲಿತರನ್ನು ತೆರವು ಮಾಡಿಸಿ, ಅವರಿಗೆ ಮನೆ ಕೊಟ್ಟಿಲ್ಲ. ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ ಎಂದು ಟೀಕಿಸಿದರು.
ಬಳ್ಳಾರಿ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ, ನಾನು ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕುತ್ತಿದ್ದೆ. ಅವನನ್ನು ಮುಗಿಸಿ ಬಿಡುತ್ತಿದ್ದೆ ಎಂದಿದ್ದಾರೆ. ಇವರು ಶಾಸಕರಾಗಲು ಅರ್ಹತೆ ಇದೆಯೇ? ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟಿಸಿ ಎಂದು ಆಗ್ರಹಿಸಿದ ಗೋವಿಂದ ಕಾರಜೋಳ, ಭರತ್ ರೆಡ್ಡಿ ಗನ್ ಮ್ಯಾನ್‍ಗಳು ಗುಂಡು ಹಾರಿಸಿ ಅಮಾಯಕರನ್ನು ಕೊಲ್ಲುತ್ತಾರೆಂದರೆ ಹೇಗೆ? ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.