ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವುದು ನನ್ನ ಕರ್ತವ್ಯ: ಡಿಸಿಎಂ ಡಿಕೆ ಶಿವಕುಮಾರ್
ಡಿ.ಕೆ.ಶಿವಕುಮಾರ್ (Photo:X)
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
2028ರ ಚುನಾವಣೆ ನಿಮ್ಮ ನಾಯಕತ್ವದಲ್ಲೆ ನಡೆಯಲಿದೆಯೇ ಎಂದು ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.
ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ನಿಮ್ಮ ನಾಯಕತ್ವ, ಬದ್ಧತೆ, ದೂರದೃಷ್ಟಿ ಪಕ್ಷ ಮುನ್ನಡೆಸಲು ಮುಖ್ಯ. ನಾನು ಏನೇ ಆಗಬಹುದು ಅದು ಮುಖ್ಯವಲ್ಲ. ಪಕ್ಷ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸಿಗನಾಗಿ ಪಕ್ಷಕ್ಕೆ ಶಕ್ತಿ ತುಂಬಿ ಮುನ್ನಡೆಸುವುದು ಮುಖ್ಯ ಎಂದು ಶಿವಕುಮಾರ್ ತಿಳಿಸಿದರು.
ಕೇಂದ್ರ ಸಚಿವರ ಭೇಟಿ:
ಮಂಗಳವಾರ(ಫೆ.25) ನಾನು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಹೊಸದಿಲ್ಲಿಗೆ ಹೋಗುತ್ತಿದ್ದೇನೆ. ರಾಜಸ್ಥಾನದಲ್ಲಿ ನಡೆದ ಜಲಸಂಪನ್ಮೂಲ ಸಚಿವರ ಸಮ್ಮೇಳನಕ್ಕೆ ಹೋದಾಗ ನಾನು ನಮ್ಮ ನೀರಾವರಿ ಯೋಜನೆಗಳ ವಿಚಾರವನ್ನು ಪ್ರಸ್ತಾಪಿಸಿದೆ. ಅದಕ್ಕೆ ಅವರು ಮಂಗಳವಾರ ಸಭೆ ಮಾಡಲು ಸಮಯ ನೀಡಿದ್ದಾರೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದವರೇ ಆದ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮೂಲಕವೇ ಕಡತ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅವರನ್ನು ಬಿಟ್ಟು ನಾನು ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೂ ನಾನು ಪತ್ರ ಬರೆದಿದ್ದೇನೆ. ನಮ್ಮ ಅಧಿಕಾರಿಗಳು ದಿಲ್ಲಿಗೆ ಪ್ರಯಾಣ ಮಾಡಿದ್ದು, ಪ್ರಾಸ್ತಾವಿಕ ಸಭೆ ಮಾಡುತ್ತಿದ್ದಾರೆ. ನನಗೆ ಸಮಯ ಸಿಕ್ಕರೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇನೆ. ಅಲ್ಲದೇ, ನೂತನ ಎಐಸಿಸಿ ಕಚೇರಿಗೂ ಹೋಗಿ ಬರುತ್ತೇನೆ. ಮರುದಿನ ಬೆಳಗ್ಗೆ ಇಶಾ ಫೌಂಡೇಷನ್ ನ ಕಾರ್ಯಕ್ರಮಕ್ಕೆ ಸದ್ಗುರು ಅವರು ಆಹ್ವಾನ ನೀಡಿದ್ದು, ಆ ಕಾರ್ಯಕ್ರಮಕ್ಕೆ ತೆರಳಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.