×
Ad

2027ಕ್ಕೆ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ನಿಲ್ದಾಣ ಕಾಮಗಾರಿ ಆರಂಭ : ಸಚಿವ ಕೃಷ್ಣಬೈರೇಗೌಡ

‘ಆಗಸ್ಟ್‌ನಲ್ಲಿ ಮೆಟ್ರೋ ಎಲಿವೇಟೆಡ್ ಮಾರ್ಗ ಪೂರ್ಣ’

Update: 2026-06-19 20:32 IST

ಬೆಂಗಳೂರು : ನಮ್ಮ ಮೆಟ್ರೋ ಎಲಿವೇಟೆಡ್ ಮಾರ್ಗವನ್ನು ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳಿಸಿ 2027ರ ಮಾರ್ಚ್‍ನಲ್ಲಿ ಗುಲಾಬಿ ಮಾರ್ಗದಲ್ಲಿನ ಸುರಂಗ ನಿಲ್ದಾಣಗಳ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದ ಬಿಎಂಆರ್‌ ಸಿಎಲ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಮೆಟ್ರೊ ಕಾಮಗಾರಿ ನಿರೀಕ್ಷೆಯ ವೇಗದಲ್ಲಿ ಆಗದಿದ್ದರೆ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲ್ಲ ಎಂದರು.

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಗುಲಾಬಿ ಮಾರ್ಗ ಈ ಜೂನ್‍ನಲ್ಲೇ ಮುಗಿಯಬೇಕಿತ್ತು. ಇದನ್ನು ಆಗಸ್ಟ್ 15ರೊಳಗೆ ಮುಕ್ತಗೊಳಿಸಲಾಗುವುದು ಎಂದು ಕೃಷ್ಣಬೈರೇಗೌಡ ಭರವಸೆ ನೀಡಿದರು.

ತಾವರೆಕೆರೆಯಿಂದ ನಾಗವಾರದವರೆಗಿನ 13.5 ಕಿ.ಮೀ. ಸುರಂಗ ಮಾರ್ಗದಲ್ಲಿ ನಿಲ್ದಾಣಗಳ ಕಾಮಗಾರಿ ಮುಗಿದಿದೆ. ಟ್ರ್ಯಾಕ್ ಹಾಗೂ ಸಿಗ್ನಲಿಂಗ್ ಕೆಲಸ ನಡೆಯುತ್ತಿದೆ. ಈ ವಿಭಾಗವನ್ನು 2027ರ ಮಾರ್ಚ್‍ಗೆ ತೆರೆಯಲು ಬಿಎಂಆರ್‌ಸಿಎಲ್ ಸಮಯ ಕೇಳಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗ ಮತ್ತು ನೀಲಿ ಮಾರ್ಗ ಕೆ.ಆರ್.ಪುರಂ-ಸಿಲ್ಕ್ ಬೋರ್ಡ್ (19.75ಕಿ.ಮೀ.) 2 `ಎ', ಹಾಗೂ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ಮಾರ್ಗ 2 `ಬಿ' ಮಾರ್ಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಸದ್ಯ, ನಮ್ಮ ಮೆಟ್ರೊ 96 ಕಿ.ಮೀ. ಉದ್ದವಿದ್ದು, ನಿಗದಿತ ಅವಧಿಯಲ್ಲಿ ಮೂರು ಮಾರ್ಗದ ಕಾಮಗಾರಿ ಮುಗಿಸಿ 2028ಕ್ಕೆ 175ಕಿ.ಮೀ.ಗೆ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಜೆ.ಪಿ.ನಗರ-ಕೆಂಪಾಪುರ ಹಾಗೂ ಹೊಸಹಳ್ಳಿ-ಕಡಬಗೆರೆವರೆಗಿನ 3ನೇ ಹಂತದ ಮೆಟ್ರೊಗೆ ಒಪ್ಪಿಗೆ ನೀಡುವ ವಿಚಾರ ಕೇಂದ್ರ ಸರಕಾರದ ಅಂಗಳದಲ್ಲಿದೆ ಎಂದು ಕೃಷ್ಣಬೈರೇಗೌಡ ಹೇಳಿದರು

ಡಬಲ್‍ಡೆಕ್ಕರ್‌ಗೆ ಕೇಂದ್ರ ಸರಕಾರ ಆಕ್ಷೇಪಿಸಿಲ್ಲ. ಬದಲಾಗಿ ಕೇಂದ್ರದ ಸ್ವಾಯುತ್ತ ಸಂಸ್ಥೆಯಾದ ರೈಟ್ಸ್‌ ನಿಂದ ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆ ವರದಿಯ ಅಧ್ಯಯನ ಮಾಡಿಸಿ ಕೊಡುವಂತೆ ಕೇಳಿದ್ದರು. ಅದರಂತೆ 4 ತಿಂಗಳಿಂದ ಅಧ್ಯಯನ ನಡೆದಿದ್ದು, 20 ದಿನಗಳಲ್ಲಿ ವರದಿ ನೀಡಲಿದ್ದಾರೆ. ಇದನ್ನು ಕೇಂದ್ರಕ್ಕೆ ಸಲ್ಲಿಸಲಿದ್ದೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

3ಎ ಹಂತದ ಸರ್ಜಾಪುರ-ಹೆಬ್ಬಾಳ ಸಂಪರ್ಕಿಸುವ ಯೋಜನೆ ಪ್ರಸ್ತಾವಕ್ಕೆ ಈಗಾಗಲೇ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಶೀಘ್ರ ಇದರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ, ಮುಂದಿನ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್, ಬಿಎಂಆರ್‍ಸಿಎಲ್‍ನ ಕಾರ್ಯಕಾರಿ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ನೀಲಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ: ನೀಲಿ 2`ಎ' ಮಾರ್ಗದಲ್ಲಿ ಮೂರು ನಿಲ್ದಾಣಗಳ ನಿರ್ಮಾಣ ವಿಳಂಬವಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಕೆ.ಆರ್.ಪುರ - ಮಾರತ್ತಹಳ್ಳಿವರೆಗೆ ಹಾಗೂ ಮಾರತ್ತಹಳ್ಳಿಯಿಂದ ಎಚ್.ಎಸ್.ಆರ್.ವರೆಗೆ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲು ಸೂಚಿಸಲಾಗಿದೆ. ಇನ್ನು, ಕೆ.ಆರ್.ಪುರದಿಂದ ಹೆಬ್ಬಾಳದವರೆಗಿನ ಕಾಮಗಾರಿ ನಡೆಸಲು ಸಾಕಷ್ಟು ಸವಾಲುಗಳಿವೆ. ಹೀಗಾಗಿ ಈ ವಿಭಾಗ 2027ರ ಡಿಸೆಂಬರ್‍ಗೆ ಮುಗಿಯುವ ನಿರೀಕ್ಷೆಯಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News