ಪ್ರಿಯಾಂಕ್‌ ಖರ್ಗೆ/ಮೋಹನ್ ಭಾಗವತ್‌ | Photo Credit : PTI

ಬೆಂಗಳೂರು : ಅಮೆರಿಕದಲ್ಲಿ ಹಿಂದುತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು RSS ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಭಾರತದಲ್ಲಿ ಮತ್ತು ವಿದೇಶಗಳಲ್ಲಿ RSSನ ನಿಲುವು ಹಾಗೂ ಭಾಷೆಯಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಆಗಸ್ಟ್ 29ರಂದು ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮಾನಿಟಿ’ ಎಂಬ ಬಹುಧರ್ಮೀಯ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿ, ಹಿಂದುತ್ವದ ಪರಿಕಲ್ಪನೆ ಮುಸ್ಲಿಮರಿಲ್ಲದ ಭಾರತವನ್ನು ಬಯಸುವುದಿಲ್ಲ ಎಂದು ಹೇಳಿದ್ದರು.

ಭಾಗವತ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಎಷ್ಟು ದೊಡ್ಡ ಬದಲಾವಣೆ!” ಎಂದು ವ್ಯಂಗ್ಯವಾಡಿದ್ದಾರೆ.

RSS ಭಾರತದಲ್ಲಿ ಕಳೆದ ಒಂದು ಶತಮಾನದಿಂದ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಅಮೆರಿಕದ ನೆಲದಲ್ಲಿ ಧಾರ್ಮಿಕ ಸೌಹಾರ್ದ, ವಿಶ್ವಮಾನವ ಏಕತೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜದ ಕುರಿತು ಮಾತನಾಡಲಾಗುತ್ತಿದೆ. ಭಾರತದಲ್ಲಿ ಪ್ರತಿಪಾದಿಸುವ ನಿಲುವು ಮತ್ತು ವಿದೇಶದಲ್ಲಿ ನೀಡುವ ಸಂದೇಶದ ನಡುವಿನ ಈ ವ್ಯತ್ಯಾಸವನ್ನು ಗಮನಿಸಬೇಕಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮೋಹನ್ ಭಾಗವತ್ ಅವರ ಮೂರು ರಾಷ್ಟ್ರಗಳ ಪ್ರವಾಸ ಹಾಗೂ ಅವರು ನೀಡುತ್ತಿರುವ ‘ವಿಶ್ವಮಾನವ ಏಕತೆ’ ಸಂದೇಶವನ್ನು ಭಾರತೀಯ ಮೂಲದ ವಲಸಿಗರಿಂದ ನಿಧಿ ಸಂಗ್ರಹಿಸಲು RSS ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಸಮುದಾಯವನ್ನು ಸಂಘಟಿಸುವಲ್ಲಿ RSSನ ವಿದೇಶಿ ಜಾಲದ ಪಾತ್ರದ ಬಗ್ಗೆಯೂ ಪರಿಶೀಲನೆ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಭಾಗವತ್ ಭಾಗವಹಿಸಿದ್ದ ನ್ಯೂಯಾರ್ಕ್‌ನ ಕಾರ್ಯಕ್ರಮವನ್ನು ಆಯೋಜಿಸಿದ್ದ AHEAD ಸಂಘಟನೆಯ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. AHEAD ತನ್ನನ್ನು ಅಂತರ್‌ಧರ್ಮೀಯ ಸಂವಾದ, ಧಾರ್ಮಿಕ ಸಾಮರಸ್ಯ ಹಾಗೂ ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿ ಪರಿಚಯಿಸಿಕೊಳ್ಳುತ್ತದೆ. ಆದರೆ, ಆ ಸಂಘಟನೆಯ ಸ್ಥಾಪಕರಿಗೆ RSS ಪರಿಸರದೊಂದಿಗೆ ನಂಟಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

RSSನ ವಿದೇಶಿ ಸಂಪರ್ಕ, ಸಂಘಟನಾ ಜಾಲ ಮತ್ತು ನಿಧಿ ಸಂಗ್ರಹಣೆಯ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

RSS ಅನ್ನು ನೋಂದಾಯಿಸಬೇಕು ಎಂಬ ತಮ್ಮ ಹಿಂದಿನ ಆಗ್ರಹವನ್ನು ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor