ಬಿಟ್ ಕಾಯಿನ್ ಹಗರಣ: ಮುಹಮ್ಮದ್ ನಲಪಾಡ್ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ
ಮುಹಮ್ಮದ್ ನಲಪಾಡ್
ಬೆಂಗಳೂರು : ಬಿಟ್ ಕಾಯಿನ್ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪಾಡ್ ವಿರುದ್ಧ ವಿಶೇಷ ತನಿಖಾ ದಳವು(ಎಸ್‍ಐಟಿ) ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದು, ಬಿಟ್ ಕಾಯಿನ್ ನಗದೀಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಮಿಷನ್ ಪಡೆದಿದ್ದಾರೆ ಎಂದು ಚಾರ್ಜ್‍ಶೀಟ್ ಬಹಿರಂಗಪಡಿಸಿದೆ.
ಆರೋಪಿ ಶ್ರೀಕಿ ಅಕ್ರಮವಾಗಿ ಹ್ಯಾಕ್ ಮಾಡಿಗಳಿಸಿದ್ದ ಬಿಟ್ ಕಾಯಿನ್‍ಗಳನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಲು ಮುಹಮ್ಮದ್ ನಲಪಾಡ್ ಅವರನ್ನು ಸಂಪರ್ಕಿಸಿದ್ದನು. ನಲಪಾಡ್ ಮುಂಬೈನಲ್ಲಿದ್ದ ಆಪ್ತ ಸ್ನೇಹಿತರು ಹಾಗೂ ರಾಬಿನ್ ಖಂಡೇವಾಲ ಎಂಬುವವರ ಜಾಲವನ್ನು ಬಳಸಿಕೊಂಡು ಈ ಬಿಟ್ ಕಾಯಿನ್‍ಗಳನ್ನು ಹವಾಲಾ ಮಾರ್ಗದ ಮೂಲಕ ನಗದೀಕರಿಸಿಕೊಟ್ಟಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಲಾಗಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ವರ್ಗಾವಣೆ ನಡೆದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು (ಈಡಿ) ಪ್ರತ್ಯೇಕವಾಗಿ ಕ್ರಿಮಿನಲ್ ತನಿಖೆ ಕೈಗೆತ್ತಿಕೊಂಡಿದ್ದು, ಈಡಿ ಅಧಿಕಾರಿಗಳು ಬೆಂಗಳೂರಿನ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ಸಂದರ್ಭದಲ್ಲಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಡಿಜಿಟಲ್ ಸಾಕ್ಷ್ಯಗಳು, ಮೊಬೈಲ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಎಸ್‍ಐಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಕೃತ ಚಾರ್ಜ್ ಶೀಟ್ ಪ್ರತಿಗಳನ್ನೂ ಈಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
‘ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲ ರನ್ನು ಬಂಧಿಸಿರುವ ಈಡಿ ಅಧಿಕಾರಿಗಳು, ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಸರಕಾರ ರಚನೆಯ ನೆಪವೊಡ್ಡಿ ಎರಡು ಬಾರಿ ಸಮನ್ಸ್ ಜಾರಿ ಮಾಡಿದರೂ ಈಡಿ ವಿಚಾರಣೆಗೆ ನಲಪಾಡ್ ಹಾಜರಾಗಿರಲಿಲ್ಲ. ಈಗ ಮೂರನೇ ಬಾರಿಗೆ ಸಮನ್ಸ್ ಜಾರಿಯಾಗಿದ್ದು, ಈ ಬಾರಿ ಹಾಜರಾಗದಿದ್ದರೆ ನಲಪಾಡ್‍ಗೆ ಸಂಕಷ್ಟ ಎದುರಾಗಲಿದೆ ಎಂದು ವರದಿಯಾಗಿದೆ.