ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo: X/@DKShivakumar)

ಬೆಂಗಳೂರು: ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ತಮ್ಮ ಸರಕಾರ ಅನುಸರಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ. ಈ ಮೂಲಕ ಪಕ್ಷದ ನಿಲುವಿಗೆ ತಾವು ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಈ ನಿರ್ಧಾರವನ್ನು ತಮ್ಮ ಗಮನಕ್ಕೆ ತರದೆ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

India Today ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನನ್ನ ಪಕ್ಷದ ಸಿದ್ಧಾಂತದಲ್ಲಿ ನನಗೆ ನಂಬಿಕೆ ಇದೆ. ನಾವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನನಗೆ ಗೊತ್ತಿಲ್ಲದೆ ಅಥವಾ ರಾಜ್ಯಪಾಲರ ಭವನದಲ್ಲಿ ಅದನ್ನು ಹಾಡಿರಬಹುದು ಎಂದು ಎಂದು ನಾನು ಭಾವಿಸುತ್ತೇನೆ, ಆದರೆ ಭವಿಷ್ಯದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಹಾಡುವ ನಿಲುವಿಗೆ ಬದ್ಧರಾಗಿದ್ದೇವೆ" ಎಂದು ಡಿಕೆ ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ನ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬುಧವಾರ ನಿರ್ಧರಿಸಿತ್ತು. ವಂದೇ ಮಾತರಂ ವಾಚನದ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು.

ತುಷ್ಟೀಕರಣದ ರಾಜಕೀಯ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವು ವೈವಿಧ್ಯತೆಯಲ್ಲಿ ನಂಬಿಕೆ ಇಟ್ಟಿದೆ. ಆದರೆ, ಬಿಜೆಪಿ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಭಾರತವು ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳನ್ನು ಒಳಗೊಂಡ ವೈವಿಧ್ಯಮಯ ದೇಶವಾಗಿದ್ದು,ಎಲ್ಲರೂ ಅದನ್ನು ಗೌರವಿಸಬೇಕು ಎಂದು ಅವರು ಹೇಳಿದರು.

“ಇದು ವಿವಿಧ ಭಾಷೆಗಳು, ಸಂಸ್ಕೃತಿಗಳು ಮತ್ತು ಪ್ರದೇಶಗಳನ್ನು ಹೊಂದಿರುವ ದೇಶ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ಸೂರ್ಯ, ನೀರು ಅಥವಾ ಗಾಳಿಗೆ ಯಾವುದೇ ಧರ್ಮವಿಲ್ಲ. ಈ ಸಂಗತಿಗಳನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಎಲ್ಲರೂ ಉಸಿರಾಡುವ ಅದೇ ಗಾಳಿಯನ್ನು ನೀವು ಉಸಿರಾಡಬೇಕು, ಎಲ್ಲರೂ ಕುಡಿಯುವ ಅದೇ ನೀರನ್ನು ನೀವು ಕುಡಿಯಬೇಕು. ಗಾಳಿ, ನೀರು, ಸಸ್ಯಗಳು ಅಥವಾ ಸೂರ್ಯನಿಗೆ ಯಾವುದೇ ಧರ್ಮವಿದೆಯೇ?” ಎಂದು ಹಿಂದೂ ಮತ್ತು ಹಿಂದುತ್ವದ ನಡುವಿನ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದಾಗ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor