ಮಲ್ಲಿಕಾರ್ಜುನ ಖರ್ಗೆ, ಎಂ.ನಾಗರಾಜ್ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ ಖಚಿತ; ಜೂ.11ಕ್ಕೆ ಅಧಿಕೃತ ಘೋಷಣೆ ಸಾಧ್ಯತೆ
ಮಲ್ಲಿಕಾರ್ಜುನ ಖರ್ಗೆ/ ಪವನ್ ಖೇರಾ / ಮನ್ಸೂರ್ ಅಲಿ ಖಾನ್/ಎಂ .ನಾಗರಾಜ್
ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸ್ಪರ್ಧಿಸಿದ್ದ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಓರ್ವ ಬಿಜೆಪಿ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜೂ.11ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಪರಿಶೀಲನೆಯ ಬಳಿಕ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ, ಪವನ್ ಖೇರಾ, ಮನ್ಸೂರ್ ಆಲಿ ಖಾನ್ ಹಾಗೂ ಬಿಜೆಪಿಯ ಎಂ.ನಾಗರಾಜ್ ಅವರುಗಳು ಸಲ್ಲಿಸಿದ್ದ ನಾಮಪತ್ರಗಳನ್ನು ಜೂ.9ರಂದು ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಪರಿಶೀಲನೆ ನಡೆಸಿದ್ದು, ‘ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ’ ಎಂದು ತಿಳಿಸಿದ್ದಾರೆ.
ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಭೋಜಣ್ಣ ಸೋಮಣ್ಣ ಅವರ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ನಾಲ್ವರು ಅಭ್ಯರ್ಥಿಗಳು ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ನಾಲ್ಕು ಸ್ಥಾನಗಳಿಗೆ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದಿರುವುದರಿಂದ ನಾಲ್ವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಉಮೇದುವಾರಿಕೆ ಹಿಂಪಡೆಯಲು ಜೂ.11 ಕೊನೆಯ ದಿನವಾಗಿದ್ದು, ಯಾರೊಬ್ಬರು ನಾಮಪತ್ರ ವಾಪಸ್ ಪಡೆಯದಿದ್ದರೆ ನಾಲ್ವರು ಆಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಸಹಿತ ಮೂವರು ಹಾಗೂ ಬಿಜೆಪಿಯ ಎಂ.ನಾಗರಾಜ್ ಅವರ ರಾಜ್ಯಸಭೆಯ ಪ್ರವೇಶದ ಹಾದಿ ಸುಗಮವಾದಂತೆ ಆಗಿದೆ.