‘ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ’ | ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಸ್ಥಳಾಂತರ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು, ಮಧ್ಯಪ್ರದೇಶದ ತನ್ನ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಿದೆ.
ಜೂ.18ರಂದು ನಡೆಯಲಿರುವ ರಾಜ್ಯಸಭೆಗೆ ಚುನಾವಣೆಯಲ್ಲಿ ಅಡ್ಡಮತದಾನವಾಗಬಹುದು ಎಂಬ ಆತಂಕ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು, ಮಧ್ಯಪ್ರದೇಶದ 63 ಜನ ಶಾಸಕರನ್ನು ಬೆಂಗಳೂರಿಗೆ ಕರೆತಂದಿದೆ. ಮಧ್ಯಪ್ರದೇಶದ ಭೋಪಾಲ್‍ನಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಈ ಶಾಸಕರನ್ನು ಕರೆತರಲಾಗಿದ್ದು, ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜೂ.18ರಂದು ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 230 ಸಂಖ್ಯಾ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸಕ್ತ 229 ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿ 164, ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 58 ಪ್ರಥಮ ಪ್ರಾಶಸ್ತ್ಯ ಮತಗಳ ಅಗತ್ಯವಿದೆ. ಈಗ ತೆರವಾಗುತ್ತಿರುವ ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳನ್ನು ಬಿಜೆಪಿ 116 ಮತಗಳ ಮೂಲಕ ತನ್ನದಾಗಿಸಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ 48 ಮತಗಳು ಉಳಿಯುವುದರಿಂದ ಬಿಜೆಪಿ ಮೂರನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
63 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದಾಗಿದೆ. ಆದರೆ, ಬಿಜೆಪಿಯು ಕಾಂಗ್ರೆಸ್ ಶಾಸಕರಿಂದ ಅಡ್ಡಮತದಾನ ಮಾಡಿಸಿ, ತನ್ನ ಮೂರನೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು ಎಂಬ ಆತಂಕ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ.
ಕಾಂಗ್ರೆಸ್ ಪಾಲಿಗೆ ಕಹಿ ಘಟನೆ: 2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಕಮಲ್ ನಾಥ್ ನೇತೃತ್ವದ ಸರಕಾರ ಅಧಿಕಾರ ಕಳೆದುಕೊಳ್ಳುವಂತಾಯಿತು. ಆದುದರಿಂದ, ರಾಜ್ಯಸಭೆ ಚುನಾವಣೆಯಲ್ಲಿ ಯಾವುದೆ ರೀತಿಯ ಅಹಿತಕರ ಬೆಳವಣಿಗೆಗಳು ಸಂಭವಿಸದಂತೆ ತಡೆಯಲು ಮುನ್ನಚ್ಚರಿಕೆಯಾಗಿ ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಮತದಾನದ ದಿನದ ವರೆಗೂ ಬೆಂಗಳೂರಿಗೆ ಸ್ಥಳಾಂತರಿಸಿದೆ.
‘ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಾಸಕರನ್ನು ಬೆಂಗಳೂರಿಗೆ ಕರೆತರಲಾಗಿದೆ. ಇಡೀ ಹೊಟೇಲ್ ಅನ್ನು ಕಾಯ್ದಿರಿಸಲಾಗಿದೆ. ನಮ್ಮ ಮತಗಳನ್ನು ಉಳಿಸಿಕೊಳ್ಳಬೇಕು. ನಾವೇನು ಬೇರೆ ಪಕ್ಷದ ಶಾಸಕರನ್ನು ಕರೆದುಕೊಂಡು ಬಂದಿಲ್ಲ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಇಲ್ಲಿಗೆ ಬಂದು ವ್ಯವಸ್ಥೆ ನೋಡಿಕೊಂಡು ಹೋಗಿದ್ದಾರೆ’
-ಎಚ್.ಸಿ.ಬಾಲಕೃಷ್ಣ, ಕಾಂಗ್ರೆಸ್ ಶಾಸಕ