‘ಪಡಿತರ ಚೀಟಿ’ ಇ-ಕೆವೈಸಿ ಗಡುವು ಅಕ್ಟೋಬರ್ 20ರ ವರೆಗೆ ವಿಸ್ತರಣೆ
ನ್ಯಾಯಬೆಲೆ ಅಂಗಡಿ ಸಮಯವೂ ಬದಲಾವಣೆ: ಪ್ರತಿದಿನ 8 ತಾಸು ಪಡಿತರ ವಿತರಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪಡಿತರ ಚೀಟಿ ಇ-ಕೆವೈಸಿ ಗಡುವನ್ನು ಅಕ್ಟೋಬರ್ 20ರ ವರೆಗೆ ವಿಸ್ತರಣೆ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಜತೆಗೆ, ಪಡಿತರ ಫಲಾನುಭವಿಗಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳ ಸಮಯವನ್ನು ಅ.1ರಿಂದ ಜಾರಿಗೆ ಬರುವಂತೆ ಬೆಳಗ್ಗೆ 7ರಿಂದ 12ರ ವರೆಗೂ, ಸಂಜೆ 4ರಿಂದ 8ಗಂಟೆಯ ವರೆಗೂ ವಿಸ್ತರಣೆ ಮಾಡಲಾಗಿದೆ. ಪ್ರತಿದಿನ 8 ತಾಸು ಪಡಿತರ ವಿತರಣೆ ಮಾಡಲೇಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಸಚಿವ ರಿಝ್ವಾನ್ ಅರ್ಶದ್, ರಾಜ್ಯದ ಬಡವರು, ಕೂಲಿ ಕಾರ್ಮಿಕರು ಪಡಿತರ ಪಡೆಯಲು ಇಡೀ ದಿನದ ದುಡಿಮೆ ಕಳೆದುಕೊಳ್ಳುವುದನ್ನು ಸರಕಾರ ಸಹಿಸುವುದಿಲ್ಲ. ಪಡಿತರದಾರರ ಅನುಕೂಲಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸಲೇಬೇಕಿದೆ. ನಿಗದಿತ ಸಮಯದಲ್ಲಿ ಅಂಗಡಿ ತೆರೆಯದೆ ಸಾರ್ವಜನಿಕರಿಗೆ ತೊಂದರೆ ಕೊಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ಆದೇಶದಂತೆ ಸೆಪ್ಟಂಬರ್ ಅಂತ್ಯದೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಸೂಚಿಸಲಾಗಿದ್ದರೂ, ತಾಂತ್ರಿಕ ಸರ್ವರ್ ಸಮಸ್ಯೆಗಳಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಯಾವುದೇ ಅರ್ಹ ಫಲಾನುಭವಿಯೂ ಪಡಿತರ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ದೃಢ ನಿಲುವಿನೊಂದಿಗೆ ಇ-ಕೆವೈಸಿ ಪೂರ್ಣಗೊಳಿಸುವ ಅಂತಿಮ ಗಡುವನ್ನು ಅ.20ರ ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇಲಾಖಾ ಹಂತದಲ್ಲಿ ಸರ್ವರ್ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಲಾಗುತ್ತಿದ್ದು, ಇದುವರೆಗೆ ಪ್ರಕ್ರಿಯೆ ಪೂರ್ಣಗೊಳಿಸದ ಫಲಾನುಭವಿಗಳು ಈ ಹೆಚ್ಚುವರಿ ಅವಕಾಶವನ್ನು ಬಳಸಿಕೊಂಡು ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟುಮಾಡಬಾರದೆಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.