×
Ad

ಗೂಳಿಹಟ್ಟಿ ಶೇಖರ್ ಗೆ ತನ್ನ ಕಚೇರಿಗೆ ಪ್ರವೇಶ ನಿರಾಕರಣೆ ಆರೋಪವನ್ನು ತಳ್ಳಿಹಾಕಿದ ಆರೆಸ್ಸೆಸ್

Update: 2023-12-06 15:16 IST

Photo: PTI

ಬೆಂಗಳೂರು:  ಆರೆಸ್ಸೆಸ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಣೆ ಬಗ್ಗೆ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ಆರೋಪವನ್ನು ಆರೆಸ್ಸೆಸ್‌ ತಳ್ಳಿಹಾಕಿದೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆಗೊಳಿಸಿರುವ ಆರೆಸ್ಸೆಸ್, ಹೊಸದುರ್ಗದ ಮಾಜಿ ಶಾಸಕರಾದ ಶ್ರೀ ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಹೇಳಿಕೆಯಲ್ಲಿ ‘ತಮಗೆ ಜಾತಿ ಕಾರಣಕ್ಕೆ ನಾಗಪುರದ ಡಾ. ಹೆಡೆಗೇವಾರ್ ಸ್ಮಾರಕ  ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು' ಎಂದು ಆರೋಪಿಸಿದ್ದಾರೆ. ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ ಎಂದು ಹೇಳಿದೆ.

ಆರೆಸ್ಸೆಸ್‍ನ ಯಾವುದೇ ಕಚೇರಿಯಲ್ಲಾಗಲೀ, ಅಥವಾ ಈ ರೀತಿಯ ಸ್ಮಾರಕ ಕಟ್ಟಡಗಳಲ್ಲಾಗಲಿ, ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎಲ್ಲಾ ಜಾತಿ, ವರ್ಗದ ಸಾವಿರಾರು ಜನ ನಿತ್ಯ ಬಂದು ಹೋಗುತ್ತಲೇ ಇದ್ದಾರೆ. ಯಾರಿಗೂ ಪ್ರವೇಶ ನಿರಾಕರಣೆಯ ಪ್ರಶ್ನೆಯೇ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು ಆನಂತರ ಅನೇಕ ಸಂಘದ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ‘ಅವಮಾನ'ದ ಬಗ್ಗೆ ಹೇಳಿರಲಿಲ್ಲ. ಈಗ ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲರನ್ನೂ ಸದಾ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದು ಆರೆಸ್ಸೆಸ್‌ ನ ದಕ್ಷಿಣ-ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News