ಸಿಎಂ ಬದಲಾವಣೆ ವಿಚಾರ | ಹೈಕಮಾಂಡ್ ಶೀಘ್ರ ಗೊಂದಲ ಬಗೆಹರಿಸಲಿ : ಸತೀಶ್ ಜಾರಕಿಹೊಳಿ
ದಾವಣಗೆರೆ, ಮೇ 8 : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಗೊಂದಲಗಳಿದ್ದು, ಶೀಘ್ರವೇ ಪಕ್ಷದ ವರಿಷ್ಠರು ಬಗೆಹರಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಯಸಿದರೆ ಐದು ವರ್ಷ ತಾವೇ ಸಿಎಂ ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಆಗಲ್ಲ ಎಂದರು.
ಪಕ್ಷದಲ್ಲಿ ಗೊಂದಲ ಇರುವುದು ನಿಜ. ಶೀಘ್ರವೇ ದಿಲ್ಲಿಯಲ್ಲಿ ಸಭೆ ಇದೆ. ಗೊಂದಲ ಬಗೆಹರಿಸಬೇಕು ಎಂಬುದು ನಮ್ಮ ಮನವಿಯಾಗಿದೆ. ಯಾರು ಮುಖ್ಯಮಂತ್ರಿ ಆಗುತ್ತಾರೋ, ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ, ಗೊಂದಲವನ್ನು ಮೊದಲು ಬಗೆಹರಿಸಬೇಕಾಗಿದೆ. ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಮುನ್ನೆಲೆಗೆ ಬಂದ ವಿಚಾರ ಗೊತ್ತಿಲ್ಲ ಎಂದು ಅವರು ತಿಳಿಸಿದರು.
‘ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ. ಅದೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮ್ಮ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಕಾದು ನೋಡೋಣ. ಯಾರಿಗೆ ಯಾವ ಸ್ಥಾನ ನೀಡಬೇಕೆಂಬುದನ್ನು ವರಿಷ್ಠರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.