×
Ad

ಶಾಸಕರ ಭವನಕ್ಕೆ ಪೀಠೋಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ: ವಿಧಾನಸಭೆ ಸಚಿವಾಲಯದಿಂದ ಸ್ಪಷ್ಟೀಕರಣ

Update: 2025-11-05 18:51 IST

ಶಾಸಕರ ಭವನ

ಬೆಂಗಳೂರು : "ಶಾಸಕರ ಭವನಕ್ಕೆ ಬೇಕಾದ ಪೀಠೋಪಕರಣ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಲಿ, ಅಕ್ರಮವಾಗಲಿ ನಡೆದಿರುವುದಿಲ್ಲ. ಖರೀದಿ ಪ್ರಕ್ರಿಯೆಯು ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆದಿರುತ್ತದೆ" ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.

"ಸರಕಾರಿ ಸಂಸ್ಥೆಗಳನ್ನು ಬದಿಗೊತ್ತಿ ಶಾಸಕರ ಭವನಕ್ಕೆ ದುಬಾರಿ ದರದಲ್ಲಿ ಪೀಠೋಪಕರಣಗಳ ಖರೀದಿ" ಶೀರ್ಷಿಕೆ ಅಡಿ ʼವಾರ್ತಾಭಾರತಿʼ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಈ ಸಂಬಂಧ ಪ್ರಕಟನೆ ಹೊರಡಿಸಿದ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಅವರು, ಮೆ.ಶ್ರೀರಾಮ್ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಪೀಠೋಪಕರಣ ಖರೀದಿಗೆ ಮೊದಲು ಸರಕಾರಿ ಸ್ವಾಮ್ಯದ ಸಂಸ್ಥೆ ಮತ್ತು ಇತರ ಖಾಸಗಿ ಸಂಸ್ಥೆಗಳಿಂದ ದರಗಳ ತುಲನಾತ್ಮಕ ಪರಿಶೀಲನೆ ಮಾಡಿ ಖರೀದಿ ಮಾಡಿದ್ದು, ದರ ದುಬಾರಿಯಾಗಿರುವುದಿಲ್ಲ. ಸರಕಾರಿ ಸ್ವಾಮ್ಯದ KSFIC ಸಂಸ್ಥೆಯಲ್ಲಿ ಮರದ ಕೆಲವು ಪೀಠೋಪಕರಣಗಳು ಮಾತ್ರ ಲಭ್ಯವಿದ್ದು, ಶಾಸಕರ ಭವನಕ್ಕೆ ಅವಶ್ಯವಿರುವ ಎಲ್ಲ ಪೀಠೋಪಕರಣಗಳ ಲಭ್ಯತೆ ಇಲ್ಲವಾಗಿತ್ತು. ಹಾಗಾಗಿ ಖಾಸಗಿ ಸಂಸ್ಥೆಯಿಂದ ಖರೀದಿಸಲಾಗಿದೆ ಎಂದು ತಿಳಿಸಿದ್ದಾರೆ.

16ನೇ ವಿಧಾನಸಭೆಗೆ ಚುನಾಯಿತರಾದ ಹಲವಾರು ಸದಸ್ಯರು ತಮಗೆ ಹಂಚಿಕೆಯಾಗಿರುವ ಶಾಸಕರ ಭವನದ ಕೊಠಡಿಗೆ ಪೀಠೋಪಕರಣ ಖರೀದಿಸಿ ಒದಗಿಸುವಂತೆ ಸಚಿವಾಲಯಕ್ಕೆ ಪತ್ರವನ್ನು ಸಲ್ಲಿಸಿದ್ದರು. ಈ ರೀತಿ ಸ್ವೀಕೃತವಾಗಿರುವ ಕೋರಿಕೆಗಳನ್ನು ಪರಿಶೀಲಿಸಿ, ಅಧಿಕಾರಿ/ಸಿಬ್ಬಂದಿಗಳ ತಂಡ ಸಮೀಕ್ಷೆ ನಡೆಸಿ ಅವಶ್ಯವಿರುವ ಪೀಠೋಪಕರಣ ಪಟ್ಟಿ ಸಿದ್ಧಪಡಿಸಿತ್ತು. ಅವುಗಳಿಗೆ ತಗುಲಬಹುದಾದ ಅಂದಾಜು ವೆಚ್ಚದ ಬಗ್ಗೆ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗೆ ಪತ್ರ ಬರೆದು ಮಾಹಿತಿ ಪಡೆಯಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಅಧಿಕಾರಿ/ಸಿಬ್ಬಂದಿಗಳ ತಂಡ ಸದರಿ ಪೀಠೋಪಕರಣಗಳಿಗೆ ಸುಮಾರು 550 ಲಕ್ಷ ರೂ.ಅಂದಾಜು ವೆಚ್ಚ ತಗುಲಬಹುದೆಂದು ತೀರ್ಮಾನಿಸಿತ್ತು. ಈ ಅನುದಾನ ಮಂಜೂರು ಮಾಡುವಂತೆ 2023ನೇ ಸಾಲಿನಲ್ಲಿ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆರ್ಥಿಕ ಇಲಾಖೆ ಪ್ರಸ್ತಾವನೆ ಪರಿಶೀಲಿಸಿ 2024-25ನೇ ಸಾಲಿನಲ್ಲಿ ಹೆಚ್ಚುವರಿ ಮಾಹಿತಿಯೊಂದಿಗೆ ಪ್ರಸ್ತಾವನೆ ಮರು ಸಲ್ಲಿಸುವಂತೆ ಈ ಸಚಿವಾಲಯಕ್ಕೆ ಹಿಂಬರಹ ನೀಡಿತ್ತು. ಆದರೆ, ಅನುದಾನ ಮಂಜೂರಾತಿ ಪ್ರಸ್ತಾವನೆ ತಿರಸ್ಕರಿಸಿರುವುದಿಲ್ಲ. ಆರ್ಥಿಕ ಇಲಾಖೆ ಪೀಠೋಪಕರಣಗಳಿಗೆ ತಗುಲಬಹುದಾದ ಸಮಂಜಸ ದರದ ವಿವರಗಳನ್ನು ಆಧರಿಸಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ಕಲಂ 4(ಜಿ) ಅಡಿ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಈ ಸಚಿವಾಲಯ ಅರ್ಥಿಕ ಇಲಾಖೆ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ. ಅಲ್ಲದೆ, ಆರ್ಥಿಕ ಇಲಾಖೆ ಯಾವುದೇ ಆಕ್ಷೇಪ ವ್ಯಕ್ತಡಿಸಿರುವುದಿಲ್ಲ. ಬೇರೆ ಬೇರೆ ಇಲಾಖೆಗಳು ಕೂಡ 4(ಜಿ) ವಿನಾಯಿತಿ ಅಡಿ ಖರೀದಿ ಪ್ರಕ್ರಿಯೆ ನಡೆಸುತ್ತವೆ. ಅಲ್ಲದೆ ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಶಾಸಕರ ಭವನಕ್ಕೆ ಅವಶ್ಯವಿರುವ ಪೀಠೋಪಕರಣಗಳನ್ನು 4(ಜಿ) ವಿನಾಯಿತಿ ಅಡಿ ಖರೀದಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಪೀಠೋಪಕರಣ ಪೂರೈಸುವಲ್ಲಿ ಆಗುತ್ತಿರುವ ವಿಳಂಬ ಕುರಿತು ವಸತಿ ಸೌಕರ್ಯಗಳ ಸಮಿತಿ ಸಭೆಯಲ್ಲಿ ಹಲವಾರು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತುರ್ತಾಗಿ ಪೀಠೋಪಕರಣ ಪೂರೈಸುವ ಉದ್ದೇಶದಿಂದ 4(ಜಿ) ವಿನಾಯಿತಿ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಉಡುಪಿ ಜಿಲ್ಲೆಯ ಮೆ.ಶ್ರೀರಾಮ್ ಎಂಟರ್ ಪ್ರೈಸಸ್ ಸಂಸ್ಥೆ ಶಾಸಕರ ಭವನಕ್ಕೆ ಅವಶ್ಯವಿರುವ ಪೀಠೋಪಕರಣಗಳನ್ನು ಸಮಂಜಸ ದರದಲ್ಲಿ ಸರಬರಾಜು ಮಾಡಲು ಅವಕಾಶ ನೀಡುವಂತೆ ಕೋರಿ ಸಚಿವಾಲಯ ಕಚೇರಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ಅಂತರಿಕ ಆರ್ಥಿಕ ಸಲಹೆಗಾರರು, ಲೋಕೋಪಯೋಗಿ ಇಲಾಖೆ ಅಧಿಕಾರಿ, ಉಡುಪಿ ಜಿಲ್ಲೆಯ ಸ್ಥಳೀಯ ಅರಣ್ಯ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿ ಸಂಸ್ಥೆಯ ಪೂರ್ವಾಪರ ಮಾಹಿತಿ ಪರಿಶೀಲಿಸಲಾಗಿದೆ. ಈ ಸಂಸ್ಥೆಯಿಂದ ಈ ಹಿಂದೆ ಸರಕಾರಿ ಸ್ವಾಮ್ಯದ ಕೈಗಾ ಅಣುಸ್ಥಾವರ ಕೇಂದ್ರ, ಉಡುಪಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರೆ ಸರಕಾರಿ ಕಚೇರಿಗಳು ಮರದ ಸಾಮಗ್ರಿ/ಪೀಠೋಪಕರಣ ಖರೀದಿಸಿವೆ.

ಈ ಸಂಸ್ಥೆ ಸರಬರಾಜು ಮಾಡುವ ಮರದ ಪೀಠೋಪಕರಣಗಳಿಗೆ ಕೇಂದ್ರ ಸರಕಾರದ ಅರಣ್ಯ ಇಲಾಖೆಯಡಿ ಬರುವ Institute of Wood Sciences Technology ಸಂಸ್ಥೆಯಿಂದ ದೃಢೀಕರಣ ಪತ್ರವನ್ನು ಹಾಗೂ ಮರವನ್ನು ಹೊರತುಪಡಿಸಿ ಇತರೆ ಪೀಠೋಪಕರಣಗಳ ಬಗ್ಗೆ Bureau of Indian Standard ಪ್ರಮಾಣ ಪತ್ರವನ್ನು ಪಡೆಯಲಾಗಿದೆ. ಸರಬರಾಜು ಮಾಡಲಾಗಿರುವ ಪೀಠೋಪಕರಣಗಳಿಗೆ 2 ವರ್ಷಗಳ ವಾರಂಟಿ ಸಹ ಪಡೆಯಲಾಗಿದೆ. ಈ ಅವಧಿಯಲ್ಲಿ ಯಾವುದೇ ದುರಸ್ತಿ ಬಂದರೂ ಸಂಸ್ಥೆ ನಿರ್ವಹಣೆ ಮಾಡುವ ನಿಬಂಧನೆ ವಿಧಿಸಲಾಗಿದೆ. ಒಟ್ಟಾರೆ, ಶಾಸಕರ ಭವನದಲ್ಲಿ ಸದಸ್ಯರುಗಳಿಗೆ ಸಂಗ್ರಹಿಸಲಾಗಿರುವ ಪೀಠೋಪಕರಣಗಳು ದುಬಾರಿ ಇರುವುದಿಲ್ಲ. ಖಾಸಗಿ ಸಂಸ್ಥೆಯಾಗಿದ್ದರೂ ಗುಣಮಟ್ಟ ಹಾಗೂ ಸಮಂಜಸ ದರಗಳ ಬಗ್ಗೆ ಖಾತ್ರಿಪಡಿಸಿಕೊಂಡು ಈ ವ್ಯವಹಾರವನ್ನು ನಡೆಸಲಾಗಿರುತ್ತದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News