ಸಿದ್ದರಾಮಯ್ಯ

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಬಗ್ಗೆ ಘೋಷಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, "ನಿನ್ನೆಯಿಂದ ತುಳು ಭಾಷಿಗರು ವ್ಯಕ್ತಪಡಿಸುತ್ತಿರುವ ಸಂತಸಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, " ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು ❤ (ಎಲ್ಲ ತುಳುವರಿಗೂ ನನ್ನ ಪ್ರೀತಿಯ ವಂದನೆಗಳು). ತುಳುವಿನ ಗೌರವದ ಹೆಜ್ಜೆಗೆ ಅಂದು ನಾನು ಮುಖ್ಯಮಂತ್ರಿಯಾಗಿ ಹಾಕಿದ ಅಡಿಪಾಯ, ಇಂದು ಸಾಕಾರಗೊಂಡಿದ್ದನ್ನು ನೋಡಿ ಖುಷಿಯಾಗುತ್ತಿದೆ. ನಿನ್ನೆಯಿಂದ ತುಳು ಭಾಷಿಗರು ವ್ಯಕ್ತಪಡಿಸುತ್ತಿರುವ ಸಂತಸಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣವಾಗಿರುವ ಬಗ್ಗೆ ನನಗೆ ಹೆಮ್ಮೆಯಿದೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

"ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಮಹತ್ವದ ಹೆಜ್ಜೆಯಿರಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಕೆ.ಎಂ. ಗಾಯತ್ರಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಭಾಷೆಗೆ ನೀಡಿರುವ ಅಧಿಕೃತ ಭಾಷಾ ಸ್ಥಾನಮಾನದ ಮಾದರಿಯನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೆ. ಆ ಅಧ್ಯಯನ ಮತ್ತು ವರದಿಯ ಮೂಲಕ ರೂಪುಗೊಂಡ ಪ್ರಕ್ರಿಯೆ ಮುಂದುವರಿದು, ಇದೀಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸಂತಸದ ಸಂಗತಿ." ಎಂದು ಅವರು ಹೇಳಿದ್ದಾರೆ.

"ಭಾಷೆ ಎಂದರೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಜನರ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಯ ಪ್ರತೀಕ. ತುಳು ಭಾಷಿಗರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಅದಕ್ಕೆ ಸಾಂಸ್ಥಿಕ ಗೌರವ ದೊರಕುವ ನಿಟ್ಟಿನಲ್ಲಿ ಅಂದು ಆರಂಭಿಸಿದ ಪ್ರಯತ್ನ ಇಂದು ಐತಿಹಾಸಿಕ ನಿರ್ಣಯವಾಗಿ ರೂಪುಗೊಂಡಿದೆ. ತುಳುವಿನ ಶ್ರೀಮಂತ ಪರಂಪರೆಗೆ ಗೌರವ ಸಲ್ಲಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor