‘ಸೌದಿ ಅರೇಬಿಯಾದಲ್ಲಿ ರಾಜ್ಯದ 600 ಉಮ್ರಾ ಯಾತ್ರಿಕರು ಅತಂತ್ರ’ : ಭಾರತೀಯ ರಾಯಭಾರ ಕಚೇರಿಗಳಿಂದ ಕ್ರಮ; ಸಹಾಯವಾಣಿ ಆರಂಭಿಸಿದ ರಾಜ್ಯ ಸರಕಾರ
Photo Credit : ndtv/Image by studiogstock on Magnific
ಬೆಂಗಳೂರು : ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ವಿವಿಧ ಭಾಗಗಳ ನಾಗರಿಕರು ಸ್ವದೇಶಕ್ಕೆ ಮರಳಲು ತೊಂದರೆ ಎದುರಿಸುತ್ತಿದ್ದಾರೆ. ಕರ್ನಾಟಕದ ಸುಮಾರು 600 ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಯಾತ್ರಿಕರನ್ನು ಆದಷ್ಟು ಬೇಗ ಭಾರತಕ್ಕೆ ಮರಳಿ ಕರೆ ತರಲು ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಹಾಗೂ ಪ್ರವಾಸ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸಿವೆ. ಅಲ್ಲದೆ, ಭಾರತೀಯ ನಾಗರಿಕರಿಗೆ ನೆರವು ನೀಡಲು ಎರಡೂ ಕಚೇರಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸೂಚನೆಗಳನ್ನೂ ನೀಡಲಾಗುತ್ತಿದೆ.
ಭಾರತೀಯ ರಾಯಭಾರ ಕಚೇರಿ ಸಂಪರ್ಕ ವಿವರ: ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದೂರವಾಣಿ ಸಂಖ್ಯೆ: +966-554412016, +966-542126784, ಟೋಲ್ ಫ್ರೀ: 8002471234 (ಸೌದಿ ಅರೇಬಿಯಾದೊಳಗಿನ ಕರೆಗಳಿಗೆ ಮಾತ್ರ), ವಾಟ್ಸಾಪ್: +966-536216082 (ಸಂದೇಶಗಳಿಗೆ ಮಾತ್ರ).
ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ: ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯ ದೂರವಾಣಿ ಸಂಖ್ಯೆ: +966-12-2614093, +966-556122301, ವಾಟ್ಸಾಪ್: +966-536209704 (ಸಂದೇಶಗಳಿಗೆ ಮಾತ್ರ) ಸಂಖ್ಯೆಯಾಗಿದೆ.
ರಾಜ್ಯ ಸರಕಾರದಿಂದ ಸಹಾಯವಾಣಿ ಆರಂಭ: ಸೌದಿ ಅರೇಬಿಯಾದಲ್ಲಿನ ಪರಿಸ್ಥಿತಿಯನ್ನು ಕರ್ನಾಟಕ ಸರಕಾರ ನಿಕಟವಾಗಿ ಗಮನಿಸುತ್ತಿದ್ದು, ಅತಂತ್ರರಾಗಿರುವ ರಾಜ್ಯದ ಯಾತ್ರಿಕರಿಗೆ ನೆರವು ಒದಗಿಸಲು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಮತ್ತು ಹಜ್ ಇಲಾಖೆಯ ಮೂಲಕ ಸಹಾಯವಾಣಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದೆ.
ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಯಾತ್ರಿಕರಿಗೆ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಹಜ್ ಇಲಾಖೆ ಸಹಾಯವಾಣಿ ಸಂಖ್ಯೆಗಳು: +91 9483503132 ಹಾಗೂ +91 7899707775, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ: 1070, 080-22253707 ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ.
ಸೌದಿ ಅರೇಬಿಯಾದಲ್ಲಿರುವ ಯಾತ್ರಿಕರು ಮತ್ತು ಅವರ ಕುಟುಂಬದವರು ಸ್ಥಳೀಯ ಅಧಿಕಾರಿಗಳು, ರಿಯಾದ್ನ ಭಾರತೀಯ ರಾಯಭಾರ ಕಚೇರಿ ಹಾಗೂ ಜಿದ್ದಾದ ಭಾರತೀಯ ಕಾನ್ಸುಲೇಟ್ ಜನರಲ್ ನೀಡುವ ಸೂಚನೆಗಳನ್ನು ಪಾಲಿಸಬೇಕು. ಅಲ್ಲದೆ, ತಮ್ಮ ಪ್ರವಾಸ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ರಾಜ್ಯ ಸರಕಾರದ ಪರವಾಗಿ ಕಂದಾಯ ಇಲಾಖೆಯ ಆಯುಕ್ತ(ವಿಪತ್ತು ನಿರ್ವಹಣೆ) ಮನೋಜ್ ಕುಮಾರ್ ಮೀನಾ ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.