×
Ad

ಚುನಾವಣೆ ಸಂದರ್ಭದಲ್ಲಿ ವಿಸ್ಕಿ, ಬಿರಿಯಾನಿ ಹಂಚಿದ ಆರೋಪ: ಶಾಸಕ ಎಚ್.ಸಿ. ಬಾಲಕೃಷ್ಣ ವಿರುದ್ಧದ ಪ್ರಕರಣ ರದ್ದು

Update: 2026-06-23 21:32 IST

ಶಾಸಕ ಎಚ್‌.ಸಿ. ಬಾಲಕೃಷ್ಣ

ಬೆಂಗಳೂರು: ವಿಧಾನಸಭೆ ಚುನಾವಣೆ (2018) ಸಂದರ್ಭದಲ್ಲಿ ಸ್ವಪಕ್ಷದ ಕಾರ್ಯಕರ್ತರೊಂದಿಗೆ ಕಾನೂನುಬಾಹಿರವಾಗಿ ಸಭೆ ನಡೆಸಿ ವಿಸ್ಕಿ ವಿತರಿಸಿ ಬಿರಿಯಾನಿ ಉಣಬಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಮತ್ತವರ ಆಪ್ತ ಸಹಾಯಕನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣ ರದ್ದು ಕೋರಿ ಎಚ್.ಸಿ. ಬಾಲಕೃಷ್ಣ ಮತ್ತು ಅವರ ಆಪ್ತ ಸಹಾಯಕ ರವಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್. ರಾಜು ಅವರು, ಅರ್ಜಿದಾರರ ವಿರುದ್ದದ ಎಲ್ಲ ಆರೋಪಗಳು ಸಂಜ್ಞೇಯ ಅಪರಾಧದ ತಳಹದಿ ಹೊಂದಿಲ್ಲ ಹಾಗೂ ತನಿಖೆ ನಡೆಸುವ ಮುನ್ನ ಪೊಲೀಸರು ಮ್ಯಾಜಿಸ್ಟ್ರೇಟ್‌ ಅವರ ಪೂರ್ವಾನುಮತಿ ಪಡೆದಿಲ್ಲ. ಇವೆಲ್ಲ ರಾಜಕೀಯ ದ್ವೇಷದಿಂದ, ಅರ್ಜಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ದಾಖಲಿಸಿರುವ ಪ್ರಕರಣವಾಗಿದೆ ಎಂದು ವಾದ ಮಂಡಿಸಿದ್ದರು. ಈ ವಾದಾಂಶವನ್ನು ನ್ಯಾಯಪೀಠ ಮನ್ನಿಸಿದೆ.

ಪ್ರಕರಣವೇನು?

ರಾಮನಗರ ತಾಲೂಕು ಕಸಬಾ ಹೋಬಳಿ ಬಸವನಪುರದಲ್ಲಿರುವ ಹಿಲ್‌ ವ್ಯೂ ರೆಸಾರ್ಟ್‌ನಲ್ಲಿ 2018ರ ಮಾರ್ಚ್‌ 27ರಂದು ಸಂಜೆ 6.30ರ ಸಮಯದಲ್ಲಿ ಬಾಲಕೃಷ್ಣ ಹಾಗೂ ರವಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ 1,500ಕ್ಕೂ ಅಧಿಕ ಜನರೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಮ್ಯಾಕ್‌ಡೊವೆಲ್‌ ಬ್ರ್ಯಾಂಡ್‌ನ ವಿಸ್ಕಿಯ 750 ಎಂಎಲ್‌ನ 47 ಹಾಗೂ 2 ಲೀಟರ್‌ನ 6 ಬಾಟಲಿಗಳು, ಇಂಪೀರಿಯಲ್‌ನ 4 ಬಾಟಲಿಗಳು ಹಾಗೂ ಬಿರಿಯಾನಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆದಿಲ್ಲ. ಜತೆಗೆ, ವಿಸ್ಕಿ ಮತ್ತು ಬಿರಿಯಾನಿ ಹಂಚಿ ಚುನಾವಣಾ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ವಿಚಕ್ಷಣಾ ದಳ ಅಂದು ಮಾಜಿ ಶಾಸಕರಾಗಿದ್ದ ಬಾಲಕೃಷ್ಣ ಹಾಗೂ ರವಿ ವಿರುದ್ಧ ಐಪಿಸಿ ಸೆಕ್ಷನ್ 34 (ಹಲವು ವ್ಯಕ್ತಿಗಳು ಸೇರಿ ಅಪರಾಧ ಮಾಡುವ ಸಾಮಾನ್ಯ ಉದ್ದೇಶದಿಂದ ಎಸಗುವ ಕೃತ್ಯ), ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 38ಎ (ಅಕ್ರಮ ಮದ್ಯ ಮಾರಾಟ ಅಥವಾ ಸಂಗ್ರಹ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ರಾಮನಗರ ಪ್ರಧಾನ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News