ಸುರತ್ಕಲ್, ಸೆ.4: ಸುರತ್ಕಲ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ( ಎನ್.ಐ.ಟಿ.ಕೆ.)ಯ ಪ್ರೊಫೆಸರ್‌ಗಳಿಬ್ಬರು ಎನ್‌ಐಟಿಕೆಗೆ ನಂಬಿಕೆ ದ್ರೋಹ ಎಸಗಿ ಅಕ್ರಮವಾಗಿ ಹಣ ದುರುಪಯೋಗಪಡಿಸಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಿತ ವಿಭಾಗದ ಪ್ರೊ. ಡಾ. ಶ್ಯಾಮ್ ಜಾನ್ಸನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಶಿವಾನಂದ ಎಂಬವರು ಎನ್‌ಐಟಿಕೆಗೆ ಲಕ್ಷಾಂತರ ರೂ. ವಂಚಿಸಿದ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಎನ್‌ಐಟಿಕೆಯ ನಿರ್ದೇಶಕ ಪಿ.ರವಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳಿಬ್ಬರು ಎನ್‌ಐಟಿಕೆಯ ಭೂಸೇನೆಯ ‘2 ಕರ್ನಾಟಕ ಇಂಜಿನಿಯರ್ ಕಂಪೆನಿ ಎನ್‌ಸಿಸಿ ಘಟಕದ ಸಹಾಯಕ ಅಧಿಕಾರಿಗಳಾಗಿ ಕರ್ತವ್ಯವನ್ನು ನಿರ್ವಹಿಸಿತ್ತಿದ್ದರು. 2026ರ ಎಪ್ರಿಲ್ 1ರಿಂದ ಆಗಸ್ಟ್ 19ರ ನಡುವೆ ವಿವಿಧೆಡೆ ಎನ್‌ಸಿಸಿ ಶಿಬಿರಗಳು ನಡೆಸಿದಿರುವುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಎನ್‌ಐಟಿಕೆಯಿಂದ ಒಟ್ಟು 13 ಲಕ್ಷ ರೂ. ಗೂ ಅಧಿಕ ಹಣ ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳ ಪೈಕಿ ಗಣಿತ ವಿಭಾಗದ ಪ್ರೊ. ಡಾ.ಪಿ.ಶ್ಯಾಮ್ ಜಾನ್ಸನ್ 12.32 ಲಕ್ಷ ರೂ. ವಂಚಿಸಿದ್ದರೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಶಿವಾನಂದ 1.18 ಲಕ್ಷ ರೂ. ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಆರೋಪಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆಯ ವಿವಿಧ ಕಾಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor