ವಲಸೆ ಹಕ್ಕಿಗಳ ಮಹಾಕಾವ್ಯಕ್ಕೆ ತಂತ್ರಜ್ಞಾನದ ಸಾಥ್

ಪಕ್ಷಿಗಳ ವಲಸೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದ ವಿವಿಧ ದೇಶಗಳ ಪಕ್ಷಿಗಳು ಪ್ರಪಂಚದ ನಾನಾ ಕಡೆ ವಲಸೆ ಹೋಗುತ್ತಲೇ ಇವೆ. ತಂತ್ರಜ್ಞಾನವು ತೆವಳುವ ಹಂತದಲ್ಲಿದ್ದಾಗ ವಲಸೆ ಪಕ್ಷಿಗಳನ್ನು ಕೇವಲ ವೀಕ್ಷಣೆಯಿಂದ ಮಾತ್ರ ಇವು ಇಂತಹ ದೇಶದ ಪಕ್ಷಿಗಳು ಎಂದು ಪತ್ತೆ ಹಚ್ಚಲಾಗುತ್ತಿತ್ತು. ಆದರೆ ತಂತ್ರಜ್ಞಾನವು ವೇಗವಾಗಿ ಓಡುವ ಹಂತದಲ್ಲಿರುವ ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳ ವಲಸೆಯನ್ನು ನಿಖರವಾಗಿ ತಿಳಿಯಲು ಸಾಕಷ್ಟು ಅವಕಾಶಗಳಿವೆ. ಅದರಲ್ಲೂ ಮುಖ್ಯವಾಗಿ ತಂತ್ರಜ್ಞಾನದ ಕೆಲವು ಸಾಧನಗಳನ್ನು ಬಳಸಿಕೊಂಡು ಪಕ್ಷಿಗಳ ವಲಸೆಯನ್ನು ಟ್ರ್ಯಾಕ್ ಮಾಡಲಾಗುತ್ತದೆ.

Update: 2024-02-18 04:34 GMT
Photo: freepik

ನಾವು ಚಿಕ್ಕವರಿದ್ದಾಗ ಅಂದರೆ ಈಗ್ಗೆ 35-40 ವರ್ಷಗಳ ಹಿಂದೆ ಬೆಳಗ್ಗೆ ಸೂರ್ಯೋ ದಯವಾಗುತ್ತಿದ್ದಂತೆ ಆಗಸದಲ್ಲಿ ಪಕ್ಷಿಗಳು ಸಾಲುಸಾಲಾಗಿ, ಹಿಂಡು ಹಿಂಡಾಗಿ ಪೂರ್ವ ದಿಕ್ಕಿನ ಕಡೆಗೆ ಹಾರಿ ಹೋಗುತ್ತಿದ್ದವು. ಸಂಜೆ ಸೂರ್ಯ ಮುಳುಗುತ್ತಿದ್ದಂತೆ ಪಕ್ಷಿಗಳು ಪುನಃ ಪಶ್ಚಿಮ ದಿಕ್ಕಿಗೆ ವಾಪಸಾಗುತ್ತಿದ್ದವು. ಅವು ಎಲ್ಲಿಗೆ ಹೋಗುತ್ತಿದ್ದವು? ಯಾಕೆ ಹೋಗುತ್ತಿದ್ದವು? ಎನ್ನುವ ಕುತೂಹಲವಂತೂ ಇದ್ದೇ ಇರುತ್ತಿತ್ತು. ಬೆಳಗ್ಗೆ ಮತ್ತು ಸಂಜೆ ಅವುಗಳ ಕೊರ ಕೊರ ಸದ್ದು ಕೇಳುವುದು ಮತ್ತು ಆಗಸದಲ್ಲಿ ಅವುಗಳ ಹಾರಾಟದ ವೈವಿಧ್ಯಮಯ ದೃಶ್ಯಗಳನ್ನು ನೋಡುವುದೇ ಒಂದು ಸೊಗಸು. ಆದರೆ ಈಗ ಆ ಪಕ್ಷಿಗಳೆಲ್ಲ ಎಲ್ಲಿ ಹೋದವು? ಎಂಬ ಪ್ರಶ್ನೆ ಕಾಡುತ್ತಲೇ ಇದೆ.

ಪಕ್ಷಿಗಳ ವಲಸೆ ನೂರಿನ್ನೂರು ಕಿಲೋಮೀಟರ್ ಮಾತ್ರವಲ್ಲ. ಅವು ಸಾವಿರಾರು ಕಿಲೋಮೀಟರ್ ದೂರದವರೆಗೆ ವಲಸೆ ಹೋಗುತ್ತವೆ. ಬಹುತೇಕ ಪಕ್ಷಿಗಳು ಗುಡ್ಡ-ಬೆಟ್ಟ, ಸಾಗರ-ಸಮುದ್ರಗಳನ್ನು ದಾಟಿ ನಿರಾಯಾಸವಾಗಿ, ನಿರಾತಂಕವಾಗಿ ಮತ್ತು ನಿರಂತರವಾಗಿ ಪಯಣಿಸುತ್ತವೆ. ಕೆಲವು ಪಕ್ಷಿಗಳು ಮಂಗೋಲಿಯಾ, ಟಿಬೆಟಿಯನ್ ಪ್ರಸ್ಥಭೂಮಿ ಮತ್ತು ಉತ್ತರ ಚೀನಾದ ತಮ್ಮ ಸಂತಾನೋತ್ಪತ್ತಿ ಪ್ರದೇಶಗಳಿಂದ ಭಾರತದಲ್ಲಿ ಚಳಿಗಾಲದ ತಾಣಗಳಿಗೆ ಪ್ರಯಾಣಿಸುವಾಗ, ಈ ಪಕ್ಷಿಗಳು ಹಿಮಾಲಯದ ಮೇಲೆ ಸಮುದ್ರ ಮಟ್ಟದಲ್ಲಿ ಲಭ್ಯವಿರುವ ಶೇ. 10ಕ್ಕಿಂತ ಕಡಿಮೆ ಆಮ್ಲಜನಕ ಬಳಸಿ 7,000 ಮೀಟರ್ ಎತ್ತರವನ್ನು ತಲುಪುತ್ತವೆ. ಇದು ಪಕ್ಷಿಗಳಲ್ಲಿನ ಇಚ್ಛಾಶಕ್ತಿಯೋ ಅಥವಾ ಅವುಗಳಲ್ಲಿನ ಆಂತರಿಕ ಬಲವೋ ತಿಳಿಯದು.

ನೀವು ಒಂದು ವಾರದ ವಿಮಾನಯಾನ ಕೈಗೊಂಡಿದ್ದೀರಿ ಎಂದು ಭಾವಿಸಿಕೊಳ್ಳಿ. ಆ ಪ್ರಯಾಣದಲ್ಲಿ ಮಲಗಲು ಅವಕಾಶವಿಲ್ಲ, ತಿನ್ನಲು ಆಹಾರವಿಲ್ಲ, ಕುಡಿಯಲು ನೀರೂ ಇಲ್ಲ. ಆಗ ನಿಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಿ. ಊಹಿಸಿಕೊಳ್ಳಲು ಕಷ್ಟವಾಗುತ್ತದೆ ಅಲ್ಲವೇ? ಯಾಕೆಂದರೆ ಒಂದು ವಾರ ಆಹಾರ ಇಲ್ಲದೆ ಬದುಕಬಹುದು. ಆದರೆ ನೀರು ಇಲ್ಲದೆ ಬದುಕುವುದು ತುಂಬಾ ಕಷ್ಟ. ಇಂತಹ ಎಲ್ಲಾ ಸಂಕಷ್ಟಗಳ ನಡುವೆಯೂ ಪಕ್ಷಿಗಳು ಒಂದು ವಾರಕ್ಕೂ ಹೆಚ್ಚು ಕಾಲ ನಿದ್ರೆ ಇಲ್ಲದೆ, ಆಹಾರ ಇಲ್ಲದೆ, ನೀರು ಇಲ್ಲದೆ ಕೇವಲ ತಮ್ಮ ರೆಕ್ಕೆಗಳಲ್ಲಿನ ಶಕ್ತಿಯನ್ನು ಬಳಸಿಕೊಂಡು ಸತತ ಪ್ರಯಾಣ ಮಾಡುತ್ತವೆ ಎಂದರೆ ಅಚ್ಚರಿಯಾಗುತ್ತದೆ.

ಕಪ್ಪು ಬಾಲದ ಹಿನ್ನೀರ ಗೊರವ (Bar tailed godwit) ಎಂಬ ಪಕ್ಷಿಯು ಅಲಾಸ್ಕಾದಿಂದ ನ್ಯೂಝಿಲ್ಯಾಂಡ್‌ವರೆಗೆ ತಡೆರಹಿತ ಹಾರಾಟದ ದಾಖಲೆಯನ್ನು ಹೊಂದಿದೆ. ಇದು ವಿಶ್ರಾಂತಿ ಇಲ್ಲದೆ 11,000 ಕಿ.ಮೀ.ವರೆಗೆ ಹಾರುತ್ತದೆ. ಪಕ್ಷಿಗಳ ವಲಸೆಯು ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಾರುವುದು ಸಾಕಷ್ಟು ಆಸಕ್ತಿದಾಯಕ ಮತ್ತು ಅದ್ಭುತ ಎನಿಸುತ್ತದೆ. ಏಕೆಂದರೆ ನಾವು ಯಾವುದಾದರೂ ಅನಾಮಿಕ ಸ್ಥಳ ತಲುಪಲು ಗೂಗಲ್ ಮ್ಯಾಪ್ ಬಳಸುತ್ತೇವೆ. ಆದರೆ ಅಂತಹ ಯಾವುದೇ ತಂತ್ರಜ್ಞಾನದ ಬಳಕೆ ಇಲ್ಲದೆ ನಿಖರವಾಗಿ ನಿಗದಿತ ಪ್ರದೇಶ ತಲುಪಿ ಅಲ್ಲಿ ಕೆಲ ಕಾಲ ವಾಸವಿದ್ದು ಪುನಃ ತಮ್ಮ ಸ್ವಪ್ರದೇಶಕ್ಕೆ ವಾಪಸಾಗುವುದು ನಿಜಕ್ಕೂ ಅಚ್ಚರಿಯೇ ಸರಿ.

ಪಕ್ಷಿಗಳು ಮುಖ್ಯವಾಗಿ ಆಹಾರ, ಸಂತಾನೋತ್ಪತ್ತಿ ಮತ್ತು ಆರೋಗ್ಯ ಸಂರಕ್ಷಣೆಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತವೆ. ಹಾಗಾಗಿ ಆಹಾರ ಮತ್ತು ಗೂಡುಕಟ್ಟುವ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಉತ್ತರ ಗೋಳಾರ್ಧದಿಂದ ಚಳಿಗಾಲದಲ್ಲಿ ನಮ್ಮ ಕರ್ನಾಟಕದ ಕೆಲವು ಪ್ರದೇಶಗಳಿಗೆ ವಲಸೆ ಬರುತ್ತವೆ. ಯುರೋಪ್ ಖಂಡದಿಂದ ಬ್ರಾಹ್ಮಿಣಿ ಬಾತುಗಳು, ಸೂಜಿಬಾಲದ ಬಾತುಗಳು, ಚಲಕ ಬಾತುಗಳು, ಸೆಳವಗಳು, ಚಾಣಗಳು, ನೆತ್ತರುಗಲ್ಲದ ನೊಣಹಿಡುಕ ಮುಂತಾದ ಕೆಲ ಹಕ್ಕಿಗಳು ವಲಸೆ ಬರುತ್ತವೆ. ರಶ್ಯದ ಸೈಬಿರಿಯನ್ ಪ್ರಾಂತದಿಂದ ಉಲಿಯಕ್ಕಿಗಳು, ಬೂದು ಕ್ರೌಂಚಗಳು ಬರುತ್ತವೆ. ಮಧ್ಯ ಏಶ್ಯದಿಂದ (ಮಂಗೋಲಿಯ) ಪಟ್ಟೆ ತಲೆಯ ಹೆಬ್ಬಾತುಗಳು ವಲಸೆ ಬರುತ್ತವೆ. ಮಧ್ಯಪ್ರಾಚ್ಯದಿಂದ ಹಾಗೂ ಅಫ್ಘಾನ್ ಕಡೆಯಿಂದ ಕರಿತಲೆಯ ಕಾಳು ಗುಬ್ಬಿ, ಕೆಂಪುತಲೆಯ ಕಾಳುಗುಬ್ಬಿಗಳು ವಲಸೆ ಬರುತ್ತವೆ. ಮಳೆಗಾಲದಲ್ಲಿ ಆಫ್ರಿಕನ್ ಖಂಡದಿಂದ ಚಾತಕ ಪಕ್ಷಿ ಅಥವಾ ಮಳೆಕೋಗಿಲೆ ಬರುತ್ತದೆ. ಮಲೆನಾಡು ಭಾಗದಿಂದ ಮಳೆಗಾಲದಲ್ಲಿ ಹಳದಿ ಕಾಲಿನ ಪಾರಿವಾಳಗಳು ಮತ್ತು ಕೆಂಪುತಲೆಯ ಗಿಳಿಗಳು, ಬಹುವರ್ಣದ ಮೈನಾಗಳು ನಮ್ಮ ಕರ್ನಾಟಕಕ್ಕೆ ವಲಸೆ ಬರುತ್ತದೆ.

ಪಕ್ಷಿಗಳ ವಲಸೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದ ವಿವಿಧ ದೇಶಗಳ ಪಕ್ಷಿಗಳು ಪ್ರಪಂಚದ ನಾನಾ ಕಡೆ ವಲಸೆ ಹೋಗುತ್ತಲೇ ಇವೆ. ತಂತ್ರಜ್ಞಾನವು ತೆವಳುವ ಹಂತದಲ್ಲಿದ್ದಾಗ ವಲಸೆ ಪಕ್ಷಿಗಳನ್ನು ಕೇವಲ ವೀಕ್ಷಣೆಯಿಂದ ಮಾತ್ರ ಇವು ಇಂತಹ ದೇಶದ ಪಕ್ಷಿಗಳು ಎಂದು ಪತ್ತೆ ಹಚ್ಚಲಾಗುತ್ತಿತ್ತು. ಆದರೆ ತಂತ್ರಜ್ಞಾನವು ವೇಗವಾಗಿ ಓಡುವ ಹಂತದಲ್ಲಿರುವ ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳ ವಲಸೆಯನ್ನು ನಿಖರವಾಗಿ ತಿಳಿಯಲು ಸಾಕಷ್ಟು ಅವಕಾಶಗಳಿವೆ. ಅದರಲ್ಲೂ ಮುಖ್ಯವಾಗಿ ತಂತ್ರಜ್ಞಾನದ ಕೆಲವು ಸಾಧನಗಳನ್ನು ಬಳಸಿಕೊಂಡು ಪಕ್ಷಿಗಳ ವಲಸೆಯನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಪಕ್ಷಿ ವಲಸೆಯ ಬಗ್ಗೆ ಮೂರು ಹೊಸ ತಂತ್ರಜ್ಞಾನಗಳು ವೇಗವಾಗಿ ವಿಸ್ತರಿಸುತ್ತಿವೆ. ಮೊದಲನೆಯದು ಪಕ್ಷಿ ಚಲನೆಯ ಉಪಗ್ರಹ ಟೆಲಿಮೆಟ್ರಿ. ಸಂಶೋಧಕರು ಚಿಕ್ಕದಾದ ಸೌರ ಚಾಲಿತ ಟ್ರಾನ್ಸ್‌ಮೀಟರ್‌ನ್ನು ಪಕ್ಷಿಗಳಿಗೆ ಅಳವಡಿಸುತ್ತಾರೆ. ಇದು ಪಕ್ಷಿಗಳು ಚಲಿಸುವ ಮತ್ತು ವಾಸ್ತವ್ಯ ಸ್ಥಳಗಳ ಮಾಹಿತಿಯನ್ನು ಉಪಗ್ರಹಕ್ಕೆ ಮತ್ತು ನಂತರ ವಿಜ್ಞಾನಿಗಳ ಕಚೇರಿ ಕಂಪ್ಯೂಟರ್‌ಗೆ ಕಳುಹಿಸುತ್ತದೆ. ಪಕ್ಷಿ ಎಲ್ಲಿದೆ? ಅಲ್ಲಿಗೆ ಹೋಗಲು ಅದು ತೆಗೆದುಕೊಂಡ ಮಾರ್ಗ ಯಾವುದು? ಅದು ಎಷ್ಟು ವೇಗವಾಗಿ ಚಲಿಸುತ್ತದೆ? ಎಂಬುದನ್ನು ಟೆಲಿಮೆಟ್ರಿಯಿಂದ ತಿಳಿಯಬಹುದು.

ಎರಡನೆಯದು ಜಿಯೋಟ್ಯಾಗ್. ದೊಡ್ಡ ಪಕ್ಷಿಗಳಿಗೆ ಟೆಲಿಮೆಟ್ರಿ ಬಳಸಿದರೆ ಚಿಕ್ಕ ಪಕ್ಷಿಗಳನ್ನು ಟ್ರ್ಯಾಕ್ ಮಾಡಲು ಜಿಯೋಟ್ಯಾಗ್ ಬಳಸಲಾಗುತ್ತದೆ. ಜಿಯೋಲೊಕೇಟರ್ ಟ್ಯಾಗ್ ಅಥವಾ ಜಿಯೋಲಾಗರ್ ಎಂಬುದು ಇದು ಸಮಯ, ಸ್ಥಳ ಮತ್ತು ಸೂರ್ಯನ ಬೆಳಕಿನ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಸರಳವಾಗಿ ದಾಖಲಿಸುವ ಒಂದು ಸಣ್ಣ ಸಾಧನವಾಗಿದೆ. ಈ ಕಿರು ಸಾಧನದ ಮೂಲಕ ಪಕ್ಷಿ ಎಲ್ಲೆಲ್ಲಿ ಚಲಿಸಿತು ಎಂಬುದನ್ನು ತಿಳಿಯಲಾಗುತ್ತದೆ.

ಮೂರನೆಯದು ಅಕೌಸ್ಟಿಕ್ ರೆಕಾರ್ಡಿಂಗ್. ರಾತ್ರಿ ವೇಳೆಯಲ್ಲಿ ಚಲಿಸುವ ಪಕ್ಷಿಗಳನ್ನು ಟ್ರ್ಯಾಕ್ ಮಾಡಲು ಅಕೌಸ್ಟಿಕ್ ರೆಕಾರ್ಡಿಂಗ್ ಬಳಸಲಾಗುತ್ತದೆ. ಇದು ಆಗಸದಲ್ಲಿ ಅಳವಡಿಸಲಾದ ಸ್ವಯಂಚಾಲಿತ ಮೈಕ್ರೋಫೋನ್ ಆಗಿದ್ದು, ಪಕ್ಷಿಗಳ ಧ್ವನಿ ಅಥವಾ ಸ್ಟ್ರೀಮ್ ಅನ್ನು ನಿರಂತರವಾಗಿ ರೆಕಾರ್ಡ್ ಮಾಡುವ ಕಂಪ್ಯೂಟರ್‌ಗೆ ಸಂಪರ್ಕಪಡಿಸಲಾಗಿದೆ. ಸಾಫ್ಟ್ ವೇರ್ ಸಹಾಯದಿಂದ ಪಕ್ಷಿಯ ಧ್ವನಿ ಗುರುತಿಸಲಾಗುತ್ತದೆ.

ಇವುಗಳ ಜೊತೆಗೆ ಪಕ್ಷಿಗಳ ವಲಸೆಯನ್ನು ಟ್ರ್ಯಾಕ್ ಮಾಡಲೆಂದೇ 1980ರ ದಶಕದಲ್ಲಿ ಅರ್ಗೋಸ್ ಎಂಬ ಉಪಗ್ರಹ ವ್ಯವಸ್ಥೆಯನ್ನು ಬಳಸಲಾಯಿತು. 1978ರಲ್ಲಿ ನಾಸಾ, ಅಮೆರಿಕದ ನ್ಯಾಶನಲ್ ಓಷಿಯಾನಿಕ್ ಆ್ಯಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಫ್ರಾನ್ಸ್‌ನ ನ್ಯಾಷನಲ್ ಸೆಂಟರ್ ಫಾರ್ ಸ್ಪೇಸ್ ಸ್ಟಡೀಸ್ ಇವುಗಳ ಸಹಯೋಗದೊಂದಿಗೆ ಅರ್ಗೋಸ್ ಉಪಗ್ರಹ ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಅರ್ಗೋಸ್‌ನ್ನು ಪಕ್ಷಿ ಸಂಶೋಧನೆಗಾಗಿ ಬಳಸಲಾಗುತ್ತದೆ.

ಅಂತರ್ಜಾಲದ ಶಕ್ತಿಯು ವಲಸೆ ಹಕ್ಕಿ ಸಂಶೋಧನೆಗೆ ಹೆಚ್ಚು ಸಹಾಯ ಮಾಡಿದೆ. ಜನಪ್ರಿಯ eಃiಡಿಜ ನೆಟ್‌ವರ್ಕ್ ಅನ್ನು ಬಳಸಿಕೊಂಡು, ಪ್ರಪಂಚದಾದ್ಯಂತದ ಪಕ್ಷಿಪ್ರೇಮಿಗಳು ಕೇಂದ್ರ ಡೇಟಾಬೇಸ್‌ಗೆ ದೃಶ್ಯಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿಗಳ ವಲಸೆಯ ಮಾರ್ಗ, ವಲಸೆ ಸಮಯದಲ್ಲಿನ ನೈಜ ದಾಖಲೆ ದೊರೆಯುತ್ತದೆ. ಉತ್ತರ ಅಮೆರಿಕದ ಖಂಡದಿಂದ ವಲಸೆ ಹೋಗುವ ಪಕ್ಷಿಗಳನ್ನು ದೃಶ್ಯೀಕರಿಸಲು ಪಕ್ಷಿಶಾಸ್ತ್ರಜ್ಞರು ಡಾಪ್ಲರ್ ಹವಾಮಾನ ರಾಡಾರ್‌ಗಳ ರಾಷ್ಟ್ರೀಯ ಜಾಲವಾದ ನೆಕ್ಸ್ರಾಡ್ ಅನ್ನು ಬಳಸಲು ಕಲಿತಿದ್ದಾರೆ. ಇದರ ಜೊತೆಗೆ ವಿಜ್ಞಾನಿಗಳು ಮೋಟಸ್ ನೆಟ್‌ವರ್ಕ್ ಎಂಬ ರಿಸೀವರ್ ಸ್ಟೇಷನ್‌ಗಳ ಜಾಗತಿಕ ಜಾಲವನ್ನು ಸ್ಥಾಪಿಸುತ್ತಿದ್ದಾರೆ. ಇದು ಪ್ರಸಕ್ತ 31 ದೇಶಗಳಲ್ಲಿ 1,500 ರಿಸೀವರ್‌ಗಳನ್ನು ಹೊಂದಿದೆ. ವಿಜ್ಞಾನಿಗಳು ಅಳವಡಿಸಿರುವ ಸಣ್ಣ ಹಾಗೂ ಹಗುರವಾದ ರೇಡಿಯೊ ಟ್ರಾನ್ಸ್‌ಮೀಟರ್‌ಗಳು 15 ಕಿ.ಮೀ. ಅಂತರದೊಳಗಿನ ಯಾವುದೇ ಪಕ್ಷಿಗಳು ಅಥವಾ ಇತರ ಪ್ರಾಣಿಗಳ ಉಪಸ್ಥಿತಿಯನ್ನು ರಿಸೀವರ್ ನಿರಂತರವಾಗಿ ದಾಖಲಿಸುತ್ತದೆ ಮತ್ತು ಡೇಟಾವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತದೆ. ವಲಸೆ ಟ್ರ್ಯಾಕ್‌ಗಳಲ್ಲಿ ಹೆಚ್ಚು ರಿಸೀವರ್ ಕೇಂದ್ರಗಳು ಸಕ್ರಿಯವಾಗುವುದರಿಂದ ಪಕ್ಷಿ ವಲಸೆಯನ್ನು ಅರ್ಥಮಾಡಿಕೊಳ್ಳಲು ನೆಟ್‌ವರ್ಕ್ ಹೆಚ್ಚು ಉಪಯುಕ್ತವಾಗುತ್ತದೆ. eಃiಡಿಜ ನೆಟ್‌ವರ್ಕ್ ಬಳಸಿ ನೀವೂ ಪಕ್ಷಿಗಳ ಮಾಹಿತಿ ಪಡೆಯಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಆರ್.ಬಿ. ಗುರುಬಸವರಾಜ

contributor

Similar News